(ಚಿತ್ರಕೃಪೆ: ಅಂತರ್ಜಾಲ)
ಇತ್ತೀಚಿನ ದಿನಗಳಲ್ಲಿ
ಕರ್ನಾಟಕದ ಆಗುಹೋಗುಗಳನ್ನು ಗಮನಿಸುತ್ತಿದ್ದರೆ ಕರ್ನಾಟಕವನ್ನು ಒಡೆಯುವ ಬಗ್ಗೆ ಪದೇಪದೇ ಮಾತುಗಳು
ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುವುದನ್ನು ನೋಡಬಹುದು. ಬಹುಷಃ ಈ ನಾಡೊಡೆಯುವ
ಹೇಳಿಕೆಗಳನ್ನು ಕೊಡಲು ಮೊದಲಿಗೆ ಶುರುಮಾಡಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಶಾಸಕರಾಗಿರುವ
ಶ್ರೀ ಉಮೇಶ ಕತ್ತಿಯವರು. ಇದಾದ ನಂತರ ಬೆಳಗಾವಿಯ ಸಂಸದರಾದ ಸುರೇಶ್ ಅಂಗಡಿಯವರು ಕತ್ತಿಯವರ
ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದರು. ಈಗ ಈ ಪಟ್ಟಿಗೆ ಮೊತ್ತೊಬ್ಬ ಬಿಜೆಪಿ ನಾಯಕ ಪ್ರಭಾಕರ
ಕೋರೆಯವರು ಬೆಳಗಾವಿಗೆ ಐಐಟಿ ಬರದಿದ್ದರೆ ಪ್ರತ್ಯೇಕತೆಯ ಹೋರಾಟದ ಎಚ್ಚರಿಕೆಯನ್ನು ನೀಡಿರುವುದು
ಮಾಧ್ಯಮದಲ್ಲಿ ವರದಿಯಾಗಿದೆ. ಇದರ ಜೊತೆಗೆ ಕಾಂಗ್ರೆಸ್ಸಿನ ಶಾಸಕರಾಗಿರುವ ಎ.ಎಸ್.ಪಾಟೀಲ್
ನಡಹಳ್ಳಿಯವರು ಪ್ರತ್ಯೇಕತೆಯ ಕೂಗಿಗೆ ಧ್ವನಿಗೂಡಿಸುತ್ತಿರುವುದನ್ನು ನೋಡಿದ್ದೇವೆ.
ಹಿರಿಯರ ಹೋರಾಟಕ್ಕೆ ರಾಜಕಾರಣದ ಹುಳಿ
ಕರ್ನಾಟಕದ ಏಕೀಕರಣದ
ಪೂರ್ವದಲ್ಲಿ ಸುಮಾರು 22 ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು ನಮ್ಮ ನಾಡಿನ
ಹಲವಾರು ಹಿರಿಯ ಚೇತನಗಳ ಹೋರಾಟದ ಫಲವಾಗಿ ಒಗ್ಗೂಡಿ ಇಂದಿನ ಕರ್ನಾಟಕ ರೂಪ ಪಡೆದುಕೊಂಡಿತು. ಇದಾಗಿ
58 ವರ್ಷಗಳು ಉರುಳಿವೆ. ಒಂದಾಗಿ ನಾಡಿನ ಸಮಗ್ರ ಅಭಿವೃದ್ಧಿಯ ಕನಸನ್ನು
ಕಂಡಿದ್ದ ಹಿರಿಯರ ಕನಸು ಇಂದಿಗೂ ನನಸಾಗದಿರುವ ಬಗ್ಗೆ ನಾವೆಲ್ಲ ಯೋಚಿಸಬೇಕಾಗಿದೆ. ಐತಿಹಾಸಿಕವಾಗಿ
ಹಾಗೂ ಸಾಮಾಜಿಕವಾಗಿ ನಾಡಿನ ವಿವಿಧ ಭಾಗಗಳ ಏಳಿಗೆ ಒಂದೇ ರೀತಿಯಲ್ಲಾಗಿಲ್ಲಾ ಎನ್ನುವುದು ದಿಟವೇ,
ಇದಕ್ಕೆ ಅದರದೇ ಆದ ಕಾರಣಗಳಿವೆ. ಈ ಪ್ರಾದೇಶಿಕ ಅಸಮತೋಲನವನ್ನು ಕಡಿಮೆಯಾಗಿಸುವ ಹಲವಾರು
ಪ್ರಯತ್ನಗಳನ್ನು ಸರಕಾರಗಳು ಮಾಡುತ್ತ ಬಂದಿವೆ (ಹೆಚ್ಚಿನ ಮಾಹಿತಿಗಾಗಿ ಡಾ. ಡಿ. ಎಂ. ನಂಜುಂಡಪ್ಪ
ವರದಿಯನ್ನು ಓದಿ). ಆದರೆ ಇದನ್ನೇ ರಾಜಕೀಯದ ದಾಳವನ್ನಾಗಿಸಿಕೊಂಡಿರುವ ಕೆಲವು ರಾಜಕಾರಣಿಗಳು
ಇಲ್ಲದ ಕಥೆ ಕಟ್ಟಿ ಜನರ ನಡುವೆ ಒಡಕನ್ನು ಉಂಟು ಮಾಡುತ್ತಿರುವ ಉದಾಹರಣೆಗಳನ್ನು ನಾವೀಗ ಪದೇ ಪದೇ
ಕಾಣುತ್ತಿದ್ದೇವೆ. ಉತ್ತರ ಕರ್ನಾಟಕ ಬೇರೆರಾಜ್ಯವಾದರೆ ತಾನಲ್ಲದಿದ್ದರೂ ತನ್ನ ಮಗನಾದರೂ
ಮುಖ್ಯಮಂತ್ರಿಯಾಗಲಿ ಎಂದು ಹೇಳುವ ಉಮೇಶ್ ಕತ್ತಿ ಒಂದೆಡೆಯಾದರೆ. ಬೆಳಗಾವಿಗೆ ಐಐಟಿ ಬರದಿದ್ದರೆ
ಪ್ರತ್ಯೇಕ ರಾಜ್ಯದ ಹೋರಾಟದ ಬೆದರಿಕೆಯನ್ನು ಪ್ರಭಾಕರ ಕೋರೆ ಹಾಕುತ್ತಾರೆ. ಆದರ ಕೋರೆಯವರು
ಐಐಟಿಗೆ ಸೂಚಿಸಲಾಗಿರುವ ಜಾಗಗಳಲ್ಲಿ ರಾಯಚೂರು ಹಾಗೂ ಧಾರವಾಡಗಳು ಸೇರಿವೆ ಎಂಬುದರ ಬಗ್ಗೆ
ಗಮನಹರಿಸುತ್ತಿಲ್ಲವೇಕೆ? ಈ ಭಾಗಗಳು ಉತ್ತರ ಕರ್ನಾಟಕದಲ್ಲಿಲ್ಲವೇ? ಈ ಭಾಗಗಳ ಏಳಿಗೆ ಉತ್ತರ
ಕರ್ನಾಟಕದ ಏಳಿಗೆಯಲ್ಲವೇ? ಸಮಗ್ರ ಕರ್ನಾಟಕದ ಏಳಿಗೆಯ ಬಗ್ಗೆ ದಾರಿ ತೋರಿಸಬೇಕಾಗಿದ್ದ ನಮ್ಮ
ಜನನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ನಾಡನ್ನೇ ಒಡೆಯುವ ಪ್ರಯತ್ನಕ್ಕೆ
ಕೈಹಾಕಿರುವುದು ನೋವಿನ ಸಂಗತಿಯೇ ಆಗಿದೆ. ಸಮಾಧಾನಕರ ವಿಷಯವೆಂದರೆ ಈ ನಾಡೊಡೆಯುವ ಮಾತಿಗೆ ಜನರು
ಹೆಚ್ಚಿನ ಮಹತ್ವ ನೀಡುತ್ತಿಲ್ಲ.
ಉತ್ತರ ಕರ್ನಾಟಕ = ಬೆಳಗಾವಿ ಮಾತ್ರವೇ?
ಇಂತಹದೊಂದು
ಪ್ರಶ್ನೆಯನ್ನು ನಾವು ಈ ಹೊತ್ತು ಕೇಳಿಕೊಳ್ಳಲೇ ಬೇಕಾಗಿದೆ. ಗಡಿ ವಿವಾದದಿಂದಾಗಿ ಬೆಳಗಾವಿ
ಕನ್ನಡಿಗರಿಗೆ ಭಾವನಾತ್ಮಕ ವಿಷಯವಾಗಿ ಎನ್ನುವುದು ದಿಟವೇ ಆಗಿದೆ. ಆದರೆ ಅದೇ ಹೊತ್ತಿನಲ್ಲಿ ಉತ್ತರ
ಕರ್ನಾಟಕವೆಂದರೆ ಎಲ್ಲಾ ಯೋಜನೆಗಳನ್ನು ಕೇವಲ ಬೆಳಗಾವಿ ಮಾತ್ರ ಸೀಮಿತವಾಗಿಸುವ ಪ್ರಯತ್ನ
ಮಾಡುತ್ತಿರುವ ರಾಜಕಾರಣಿಗಳ ನಡೆಯ ಬಗ್ಗೆ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ. ಏಕೀಕರಣದ
ಪೂರ್ವದಿಂದಲೂ ಮುಂಬೈ ಕರ್ನಾಟಕಕ್ಕಿಂತಲೂ ಹೈದರಾಬಾದ್ ಕರ್ನಾಟಕ ಎಲ್ಲಾ ಹಂತಗಳಲ್ಲೂ
ಹಿಂದುಳಿದಿರುವುದು ಡಾ. ಡಿ. ಎಂ. ನಂಜುಂಡಪ್ಪ ಅವರ ವರದಿ ಎಂದು ಹೇಳುತ್ತದೆ (ಗಮನಿಸಿ ಡಾ.
ಡಿ. ಎಂ. ನಂಜುಂಡಪ್ಪ ಅವರ ವರದಿಯಲ್ಲಿ ಹೇಳಿರುವಂತೆ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ
ಮೈಸೂರು ಪ್ರಾಂತ್ಯಗಳಲ್ಲಿ ಹಲವಾರು ಭಾಗಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ) ಆದರೆ
ಪ್ರತ್ಯೇಕತೆಯ ಬಗ್ಗೆ ಮಾತನಾಡುವ ರಾಜಕಾರಣಿಗಳೆಲ್ಲರೂ ಬೆಳಗಾವಿಯನ್ನೇ ಕೇಂದ್ರವಾಗಿಸಿಕೊಂಡು ಹೊಸರಾಜ್ಯ
ಕಟ್ಟುವ ಬಗ್ಗೆ ಮಾತನಾಡುತ್ತಿರುವುದಾದರೂ ಏಕೆ? ಇವರ ಕಣ್ಣಿಗೆ ಕೊಪ್ಪಳ, ಯಾದಗಿರಿ, ಬೀದರ್,
ಬಾಗಲಕೋಟೆ, ವಿಜಯಪುರ ಮುಂತಾದ ಹಿಂದುಳಿದ ಜಿಲ್ಲೆಗಳು ಕಾಣಿಸುತ್ತಿಲ್ಲವೇ? ಯಾಕೆ ಇವರುಗಳು ಎಲ್ಲಾ
ಯೋಜನೆಗಳು ಬೆಳಗಾವಿಗೇ ಬರಬೇಕೆಂದು ಪಟ್ಟು ಹಿಡಿದಿರುವುದು? ಉತ್ತರ ಕರ್ನಾಟಕದ ಬಗ್ಗೆ ಕಾಳಜಿ
ಹೊಂದಿರುವವರಂತೆ ಮಾತನಾಡುತ್ತಾ ಇರುವ ಇವರುಗಳು ಬೇರೆ ಜಿಲ್ಲೆಗಳ ಅಭಿವೃದ್ಧಿಯ ಬಗ್ಗೆ
ಗಮನಹರಿಸಿದ್ದಾರೆಯೇ?
ಇದರ ಮೂಲ ಕೆದಕಿದರೆ ಕಾಣುವುದು
ಈ ರಾಜಕಾರಣಿಗಳ ಸ್ವಾರ್ಥ. ಬೆಳಗಾವಿಯಲ್ಲಿ ತಮ್ಮ ವ್ಯವಹಾರದ ಜಾಲವನ್ನೇ ಬೆಳೆಸಿಕೊಂಡಿರುವ ಇವರಿಗೆ
ಬೆಳಗಾವಿ ಕೇಂದ್ರಿತ ರಾಜ್ಯವೊಂದು ಮಾಡುವುದಾದರೆ ಅದರ ಲಾಭವನ್ನು ಸುಲಭವಾಗಿ ತಾವೇ ಪಡೆಯಬಹುದು
ಎನ್ನುವ ಸ್ವಾರ್ಥ ಮಾತ್ರವೇ ಇರುವುದು. ನಿಜವಾಗಿಯೂ ಇವರಿಗೆ ಉತ್ತರ ಕರ್ನಾಟಕದ ಅಭಿವೃದ್ಧಿಯ
ಬಗ್ಗೆ ಕಾಳಜಿ ಇದ್ದಿದ್ದೇ ಆಗಿದ್ದರೆ ಉತ್ತರ ಕರ್ನಾಟಕದ ಅನೇಕ ಸಮಸ್ಯೆಗಳ ಬಗ್ಗೆ ಯಾವತ್ತಾದರೂ
ಗಟ್ಟಿಧ್ವನಿಯಲ್ಲಿ ಮತನಾಡಿರುವುದನ್ನು ಕಂಡಿದ್ದೇವೆಯೇ? ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ
ಆಗಿರುವ ಅನ್ಯಾಯ, ಕಳಸಾ ಬಂಡೂರ ಕುಡಿಯುವ ನೀರಿನ ಯೋಜನೆ, ಗಡಿ ವಿವಾದ (ಇದೇ ನಾಯಕರುಗಳು ತಮ್ಮ
ಸ್ಥಾನ ಗಟ್ಟಿ ಮಾಡಿಕೊಳ್ಳಲಿಕ್ಕೆ ಎಂ.ಇ.ಎಸ್ಸಿನವರ ಜೊತೆ ಕೈಜೋಡಿಸಿದ್ದಿದೆ), ಬರ ಪರಿಹಾರ,
ಆರ್ಟಿಕಲ್ 371 ಜೆ ಅನುಷ್ಠಾನ ಮುಂತಾದ ವಿಷಯಗಳ ಬಗ್ಗೆ ಕಾಳಜಿ ತೋರಿಸಿದ್ದಾರೆಯೇ? ಮಾತೆತ್ತಿದರೆ
ಬೇರೆ ರಾಜ್ಯವಾದರೆ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದು ಹೇಳುವ ಇವರು ಇದುವರೆಗೂ ಈ
ಭಾಗದ ಅಭವೃದ್ಧಿಗೆ ತಾವು ರೂಪಿಸಿರುವ ಯೋಜನೆಗಳ ಬಗ್ಗೆ ಎಂದಿಗೂ ಮಾತನಾಡಿಲ್ಲ. ಉತ್ತರ ಕರ್ನಾಟಕ
ಬೇರೆ ರಾಜ್ಯವಾಗುವುದರಿಂದಲೇ ಅಭಿವೃದ್ಧಿ ಸಾಧ್ಯ ಎನ್ನುವುದರ ಬಗ್ಗೆ ಇವರು ಏನಾದರೂ ಅಧ್ಯಯನ
ಮಾಡಿದ್ದಾರೆಯೇ?
ಮೇಲಾಗಿ ಬೇಕೋ ಬೇಡವೋ ಈ
ಪ್ರತ್ಯೇಕತೆಯಲ್ಲಿ ಜಾತಿ ರಾಜಕಾರಣವೂ ಸಹ ಬಹುದೊಡ್ಡ ಪಾತ್ರವೊಂದನ್ನು ವಹಿಸುತ್ತಿರುವುದು
ಕಾಣಿಸುತ್ತಿದೆ. ಇಲ್ಲಿಯವರೆಗೂ ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತಿರುವ ರಾಜಕಾರಣಿಗಳೆಲ್ಲರೂ ಲಿಂಗಾಯಿತ
ಜಾತಿಗೆ ಸೇರಿದವರಾಗಿರುವುದು ಕೇವಲ ಕಾಕತಾಳೀಯವಲ್ಲವೆನೋ ಎಂದು ಅನ್ನಿಸುತ್ತಿದೆ.
ಇಂದು ಕರ್ನಾಟಕ
ಒಂದಾಗಿರುವುದರಿಂದ ಇದರ ಫಲ ಉಣ್ಣುತ್ತಿರುವವರು ಕೇವಲ ದಕ್ಷಿಣ ಕರ್ನಾಟಕದ ಜನರು ಮಾತ್ರವಲ್ಲ
ಎನ್ನುವುದು ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿರುವ ರಾಜಕಾರಣಿಗಳಿಗೂ ಗೊತ್ತಿದೆ. ಒಂದು ವೇಳೆ
ಉತ್ತರ ಕರ್ನಾಟಕವನ್ನು ಒಡೆದಿದ್ದೆ ಆದರೆ ಹೊಸ ರಾಜ್ಯಕ್ಕೆ ಬೇಕಾಗಿರುವ ಸಂಪನ್ಮೂಲ ಎಲ್ಲಿಂದ
ತರುತ್ತಾರೆ? ಜನರಿಗೆ ಉದ್ಯೋಗಕ್ಕೆ ಏನು ಮಾಡುತ್ತಾರೆ? ಇಂದು ಬೆಂಗಳೂರು ರಾಜ್ಯ ಮೂಲೆ ಮೂಲೆಯಿಂದ
ಬಂದ ಪ್ರತಿಯೊಬ್ಬರಿಗೂ ಕೆಲಸ ನೀಡುತ್ತಿದೆ. ರಾಜ್ಯ ಒಡೆದರೆ ಮುಂದೇನು? ಸಣ್ಣ ರಾಜ್ಯಗಳು ಕೇಂದ್ರದ
ಅಡಿಯಾಳಾಗಬೇಕಾಗುತ್ತದೆ ಎನ್ನುವುದು ಇತ್ತೀಚಿಗೆ ಆಗಿರುವ ತೆಲಂಗಾಣ ಹಾಗೂ ಆಂಧ್ರಪ್ರದೇಶವನ್ನೇ
ನೋಡಿದರೆ ಗೊತ್ತಾಗುತ್ತದೆ.
ನಮ್ಮಲ್ಲಿ ಇಂದು
ಸಮಸ್ಯೆಗಳಿವೆ ನಿಜ. ಆದರೆ ಅವೇನು ಪರಿಹರಿಸಲು ಸಾಧ್ಯವಾಗದಂತಹ ಸಮಸ್ಯೆಗಳೇನಲ್ಲ. ಎಲ್ಲವೂ
ಆಡಳಿತಕ್ಕೆ ಸಂಬಂಧಿಸಿರುವಂತಹವೇ. ಜನಪ್ರತಿನಿಧಿಗಳು ಮೈಯಲ್ಲ ಕಣ್ಣಾಗಿ ದುಡಿದರೆ ಮುಂದಿನ
ದಿನಗಳಲ್ಲಿ ಸರಿಪಡಿಸಿಕೊಳ್ಳಬಹುದಾದ ವಿಷಯಗಳೇ. ಆದರೆ ಕಡ್ಡಿಯನ್ನು ಗುಡ್ಡ ಮಾಡಿ ತಮ್ಮ
ಸ್ವಾರ್ಥಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ನಾಡೊಡೆಯಲು ಹೊರಟಿರುವ ನಾಯಕರಿಗೆ ಜನರೇ ಪಾಠ
ಕಲಿಸಬೇಕಾಗಿದೆ. ಕನ್ನಡ ನಾಡು ಹಿಂದೆ ಜಗತ್ತಿಗೆ ದಾರಿ ತೋರುವ ನಾಡಾಗಿತ್ತು ನಾವೆಲ್ಲ
ಒಟ್ಟಾಗಿದ್ದರೆ ಮುಂದೆಯು ಅಂತಹ ದಿನಗಳು ಬರುವುದರಲ್ಲಿ ಸಂಶಯವೇ ಬೇಡ. ಒಗ್ಗಟ್ಟಿನಲ್ಲಿ ಬಲವಿದೆ,
ಪ್ರತ್ಯೇಕತೆ ಪರಿಹಾರವಲ್ಲಾ.
ಚೇತನ್ ಜೀರಾಳ

