Wednesday, April 22, 2015

ಮೇಕೆದಾಟು: ನ್ಯಾಯವಷ್ಟೇ ಅಲ್ಲಾ! ದಬ್ಬಾಳಿಕೆಗೆ ತಡೆಯೂ ಹೌದು!

ಕಾವೇರಿ ನದಿ ನೀರು ಹಂಚಿಕೆಯ ಹೋರಾಟಕ್ಕೆ ಮೇಕೆದಾಟು ಕುಡಿಯುವ ನೀರು ಯೋಜನೆ ಹೊಸ ಸೇರ್ಪಡೆಯಾಗಿದೆ.೨೦೦೭ರಲ್ಲಿ ಹೊರಬಂದ ಕಾವೇರಿ ಐತೀರ್ಪಿನಲ್ಲಿ ಕರ್ನಾಟಕವು ವಾರ್ಷಿಕ ೧೯೨ ಟಿಎಂಸಿಯಷ್ಟು ನೀರನ್ನು ಗೊತ್ತುಮಾಡಿದ ಪ್ರಮಾಣದಲ್ಲಿ ಹಂತಹಂತವಾಗಿ ಕರ್ನಾಟಕವು ತಮಿಳುನಾಡಿಗೆ ಹರಿಸಬೇಕು ಎಂಬ ಆದೇಶವಿದೆ. ಕಳೆದ ಹತ್ತುವರ್ಷಗಳಲ್ಲಿ ಕರ್ನಾಟಕದಿಂದ ಸರಾಸರಿ ೨೫೦ ಟಿಎಂಸಿಯಷ್ಟು ಅಂದರೆ ಸರಿಸುಮಾರು ೬೦ ಟಿಎಂಸಿ ನೀರು ಹೆಚ್ಚುವರಿಯಾಗಿ ನೀರನ್ನು ತಮಿಳುನಾಡಿಗೆ ಹರಿದಿದೆ. ಅಂದರೆ ಕರ್ನಾಟಕವು ತಮಿಳುನಾಡಿಗೆ ಸಾಮಾನ್ಯ ಮಳೆಗಾಲದ ವರ್ಷಗಳಲ್ಲಿ ನೀರಿಗೆ ಕೊರತೆಯಾಗದಂತೆ ನೀರು ಪೂರೈಕೆಮಾಡಿದೆ.

ಬೆಂಗಳೂರು ನಗರ ಕಾಲಾಂತರದಿಂದಲೂ ಕುಡಿಯುವ ನೀರಿಗಾಗಿ ಬಹುತೇಕ ಕಾವೇರಿ ನದಿಯನ್ನು ನಂಬಿಕೊಂಡಿದೆ. ತೀವ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನ ಜನಸಂಖ್ಯೆಯು ರಾಜ್ಯದ ಒಟ್ಟು ಜನಸಂಖ್ಯೆಯ ೧೬% ಇದ್ದು ಎಂಬತ್ತು ಲಕ್ಷವನ್ನು ದಾಟಿದೆ. ಬೆಳೆಯುತ್ತಿರುವ ಬೆಂಗಳೂರು ನಗರವೊಂದಕ್ಕೆ ಸದ್ಯ ೧೬ ಟಿಎಂಸಿಯಷ್ಟು ನೀರು ಬೇಕಿದ್ದು, ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಇದರ ಪ್ರಮಾಣ ೩೦ ಟಿಎಂಸಿ ಆಗಲಿದೆ. ಆದರೆ ವಾಸ್ತವವಾಗಿ ಕಾವೇರಿ ನದಿಯನ್ನು ಕುಡಿಯುವ ನೀರಿಗಾಗಿ ಬರಿ ಬೆಂಗಳೂರಲ್ಲದೆ ಕರ್ನಾಟಕದ ಇನ್ನೂ ನಾಲ್ಕಾರು ಜಿಲ್ಲೆಗಳು ಆಶ್ರಯಿಸಿವೆ. ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ನೆರೆಯ ಪ್ರದೇಶಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಇತರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಕರ್ನಾಟಕವು ತನ್ನ ಗಡಿಯಾದ ಮೇಕೆದಾಟುವಿನಲ್ಲಿ ಜಲಾಗಾರವನ್ನು ನಿರ್ಮಿಸಲು ಯೋಜಿಸಿದೆ. ಈ ಯೋಜನೆಯಂತೆ ಮೇಕೆದಾಟುವಿನಲ್ಲಿ ಕಣಿವೆಗೆ ಧುಮುಕುವ ಕಾವೇರಿಯಲ್ಲಿ ಸಹಜವಾದ ನೀರ್ಬೀಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಅಂಶವೂ ಸೇರಿದ್ದು, ಇದರಿಂದಾಗಿ ತಮಿಳುನಾಡಿಗೆ ಹರಿಯುವ ೧೯೨ ಟಿಎಂಸಿ ನೀರಿನ ಪ್ರಮಾಣಕ್ಕೆ ಯಾವುದೇ ಧಕ್ಕೆಯಾಗದು.

ಈ ಅಣೆಕಟ್ಟೆಯು ಇನ್ನೂ ಯೋಜನೆಯ ಹಂತದಲ್ಲಿದ್ದು ಇನ್ನೂ ವಿವರವಾದ ಯೋಜನಾ ವರದಿ ತಯಾರಾಗಬೇಕಿದೆ. ಇಲ್ಲಿ ಗಮನಿಸಬೇಕಾದ್ದು ಏನೆಂದರೆ ಕಾವೇರಿ ನದಿನೀರು ಹಂಚಿಕೆಯ ತೀರ್ಪು ಅದೆಷ್ಟೇ ಅನ್ಯಾಯದ್ದಾಗಿದ್ದರೂ ಕರ್ನಾಟಕ ಅದನ್ನು ಪಾಲಿಸುತ್ತಲೇ ಬಂದಿದೆ ಮತ್ತು ಮೇಕೆದಾಟು ಕುಡಿಯುವ ನೀರು ಅಣೆಕಟ್ಟು ಯೋಜನೆಯನ್ವಯ ಕರ್ನಾಟಕದಲ್ಲಿ ಬೀಳುವ ಹೆಚ್ಚುವರಿ ಮಳೆಯ ನೀರನ್ನು ಹಿಡಿದಿಟ್ಟುಕೊಂಡು ಕುಡಿಯುವ ನೀರು ಪೂರೈಕೆ ಮಾಡುವುದು. ಕಾವೇರಿ ಐತೀರ್ಪಿಗೆ ಒಳಪಟ್ಟಿರುವಂತೆಯೇ ಕರ್ನಾಟಕವು ಸದರಿ ಯೋಜನೆಯನ್ನು ರೂಪಿಸಿದ್ದು ಇದರಲ್ಲಿ ಒಟ್ಟು ಸುಮಾರು ೫೦ ಟಿಎಂಸಿ ನೀರನ್ನು ಕೂಡಿಡಲು ಉದ್ದೇಶಿಸಿದೆ. ಈಗ ತಾನು ಬಳಸಲು ಉದ್ದೇಶಿಸಿರುವ ಈ ನೀರು, ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿದು ಹೋಗುತ್ತಿರುವ ನೀರಾಗಿದೆ ಮತ್ತು ಈ ಯೋಜನೆಯ ಉದ್ದೇಶ ಕುಡಿಯುವ ನೀರುಪೂರೈಕೆಗಾಗಿ ಎಂಬ ಎರಡು ಬಲವಾದ ಅಂಶಗಳು ಕರ್ನಾಟಕದ ಬೆನ್ನಿಗಿವೆ.

ತಮಿಳುನಾಡು ಈಗ ಇದರ ವಿರುದ್ಧವಾಗಿ ಎತ್ತಿರುವ ತಕರಾರು ಮಾತ್ರಾ ತೀರಾ ಅನ್ಯಾಯ ಮತ್ತು ದುರುದ್ದೇಶದ್ದಾಗಿದೆ. ತಾನು ಮಾತ್ರಾ ಕುಡಿಯುವ ನೀರಿಗಾಗಿ ಹೊಗೇನಕಲ್ ದ್ವೀಪದ ಕರ್ನಾಟಕದ ಪಾಲಿನ ನೆಲದಲ್ಲಿ ಅಕ್ರಮವಾಗಿ ನೀರಾವರಿ ಯೋಜನೆ ಮಾಡಬಹುದು. ಅದನ್ನು ಪ್ರಶ್ನಿಸಿದರೆ ಕುಡಿಯುವ ನೀರಿನ ಮಾನವೀಯ ಬೇಡಿಕೆಯನ್ನು ಮುಂದಿಡುತ್ತದೆ. ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಮಾತ್ರಾ ತನ್ನ ಬೆಳೆಗಳಿಗೆ ನೀರು ಸಿಗುವುದಿಲ್ಲಾ ಎನ್ನುತ್ತಾ ವಿರೋಧ ತೋರಿಸುತ್ತದೆ. ಕರ್ನಾಟಕದಲ್ಲಿ ಯಾವುದೇ ನೀರಾವರಿ ಯೋಜನೆ, ಅಣೆಕಟ್ಟು ಕಟ್ಟುವುದು, ಕೆರೆಕುಂಟೆ ಹೂಳೆತ್ತಿ ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವುದನ್ನು ವಿರೋಧಿಸುತ್ತದೆ. ಮಾತೆತ್ತಿದರೆ ಸುಪ್ರೀಂಕೋರ್ಟ್ ಮತ್ತು ಸಂಸತ್ತಿನ ಮೆಟ್ಟಿಲೇರುವ ಚಾಳಿಯನ್ನು ರೂಪಿಸಿಕಂಡಿದ್ದು ಕರ್ನಾಟಕವು ತನ್ನ ಬಲಹೀನ ರಾಜಕೀಯ ಇಚ್ಛಾಶಕ್ತಿಯ ಕಾರಣದಿಂದ ಮುಖಭಂಗ ಮಾಡಿಸಿಕೊಳ್ಳುತ್ತಲೇ ಬಂದಿದೆ. ಈಗಿನ ತಮಿಳುನಾಡಿನ ಹುನ್ನಾರವೆಂದರೆ ಕಾವೇರಿ ಐತೀರ್ಪಿನ ಅನ್ವಯ ತನ್ನ ಪಾಲಿಗೆ ಕರ್ನಾಟಕ ಬೀಡಬೇಕಾದ ೧೯೨ ಟಿಎಂಸಿ ನೀರಲ್ಲದೆ ಹೆಚ್ಚುವರಿಯಾಗಿ ಹರಿಯುವ ನೀರೂ ತನ್ನ ನೆಲಕ್ಕೆ ಹರಿಯಬೇಕೆಂಬುದು. ಇದರ ಅರ್ಥ ಕರ್ನಾಟಕದ ಅಣೆಕಟ್ಟುಗಳಿರುವುದು ತಮಿಳುನಾಡಿಗೆ ಕಾಲಕಾಲಕ್ಕೆ ನೀರು ಪೂರೈಸುವ ಜಲಾಗಾರಗಳಾಗಲಿ ಇರಲಿಕ್ಕೆ ಎನ್ನುವುದಾಗಿದೆ.

ಐತೀರ್ಪಿನ ಅನ್ವಯ ಸಾಮಾನ್ಯ ಮಳೆಗಾಲದ ವರ್ಷದಲ್ಲಿ ೧೯೨ ಟಿಎಂಸಿ ನೀರನ್ನು ಹರಿಸಲು ಮಾತ್ರಾ ಬದ್ಧವಾಗಿದ್ದು ಉಳಿದಂತೆ ಹೆಚ್ಚುವರಿ ನೀರನ್ನು ತಾನೇ ಬಳಸಿಕೊಳ್ಳಲು ಯಾವುದೇ ಅಡ್ಡಿ ಎದುರಾದರೂ ಬದಿಗೆ ಸರಿಸಿ ಮುನ್ನಡೆಯಬೇಕು. ಇದಕ್ಕೆ ಗಟ್ಟಿಯಾದ ರಾಜಕೀಯ ಇಚ್ಛಾಶಕ್ತಿ, ಕಾನೂನಿನ ಆಳವಾದ ಅರಿವು, ತೀವ್ರಗತಿಯಲ್ಲಿ ಯೋಜನೆಯನ್ನು ಪೂರೈಸುವ ಛಲ ಬೇಕು ಅಷ್ಟೇ!
- ಆನಂದ್ ಜಿ.

ಹಂಚಿಕೊಳ್ಳಿ Share to Facebook Share to Twitter Email This