![]() |
| (ಚಿತ್ರಕೃಪೆ: ಉದಯವಾಣಿ ದಿನಪತ್ರಿಕೆ) |
"ಉತ್ತರ
ಕರ್ನಾಟಕದ ಏಳಿಗೆ ಮತ್ತು ಪ್ರತ್ಯೇಕ ರಾಜ್ಯದ ಹೋರಾಟದ ಭಾಗವಾಗಿ ನಾವು ಇಂತಿಂತಹ ಯೋಜನೆಗಳನ್ನು
ಮಾಡಿಕೊಂಡಿದ್ದೇವೆ. ೨೦೧೮ರ ಚುನಾವಣೆಯ ಹೊತ್ತಿಗೆ ಈ ಉರಿಯನ್ನು ದೊಡ್ಡದಾಗಿಸಿ ಪ್ರತ್ಯೇಕ ರಾಜ್ಯ ಮಾಡುವುದು ನಮ್ಮ ಗುರಿ" ಎಂಬರ್ಥದಲ್ಲಿ ವಿಜಾಪುರದ
ಶಾಸಕರಾದ ಶ್ರೀ ಎ. ಎಸ್. ಪಾಟೀಲ ನಡಹಳ್ಳಿಯವರು ಹೇಳಿಕೆ ನೀಡಿದ್ದಾರೆ. ಕರ್ನಾಟಕ ಒಡೆಯುವುದನ್ನೇ
ತಮ್ಮ ಪರಮಗುರಿಯಾಗಿ ಮಾಡಿಕೊಂಡಿರುವಂತೆ ನಡೆದುಕೊಳ್ಳುತ್ತಿರುವ ತಂಡದ ಹೊಸನಾಯಕರಾಗಿ ಶ್ರೀಯುತರು
ದನಿ ಎತ್ತಿದ್ದಾರೆ. ಇದುವರೆವಿಗೆ ಬೆಳಗಾವಿ ಜಿಲ್ಲೆಯವರಾದ ಶ್ರೀ ಉಮೇಶ್
ಕತ್ತಿಯವರಿಂದ ಈ ಕೂಗನ್ನು ಎಬ್ಬಿಸಲಾಗುತ್ತಿತ್ತು. ಅದಕ್ಕೆ ಅಷ್ಟಾಗಿ ಬೆಂಬಲ ಸಿಗದ ಕಾರಣದಿಂದ ವಿಜಯಪುರ ಜಿಲ್ಲೆಯ ರಾಜಕಾರಣಿಯ ಕಡೆಯಿಂದ ಈ ಕೂಗನ್ನು
ಎಬ್ಬಿಸಲಾಗುತ್ತಿದೆ. ಇವರ ನಿಜವಾದ ಬೇಡಿಕೆ ಏನು? ಇವರ
ಸಮಸ್ಯೆ ಏನು? ಇವರು ಕೊಡುತ್ತಿರುವ ಪರಿಹಾರವೇನು?
ಒಡೆದು ಬೇರೆಯಾಗುವ ಉತ್ತರ
ಕರ್ನಾಟಕದ ಹದಿಮೂರು ಜಿಲ್ಲೆಗಳೆಂದು ಇವರು ಗುರುತಿಸಿರುವುದು ಬೆಳಗಾವಿ, ಕಲ್ಬುರ್ಗಿ, ಬಳ್ಳಾರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಧಾರವಾಡ, ಬೀದರ್, ಉತ್ತರ
ಕನ್ನಡ, ಕೊಪ್ಪಳ, ಹಾವೇರಿ, ಯಾದಗಿರಿ ಮತ್ತು ಗದಗ ಜಿಲ್ಲೆಗಳನ್ನು.
ವಾಸ್ತವವಾಗಿ ತಮ್ಮ ನಡುವೆ ಭೌಗೋಳಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಇಂದಿನ ಉತ್ತರ ಮತ್ತು ದಕ್ಷಿಣ
ಕರ್ನಾಟಕಗಳಂತೆಯೇ ವೈವಿಧ್ಯತೆಯನ್ನು ಹೊಂದಿರುವ ಈ ಜಿಲ್ಲೆಗಳನ್ನೆಲ್ಲಾ ಕೂಡಿಸಿಕೊಂಡು ಪ್ರತ್ಯೇಕ
ರಾಜ್ಯ ಮಾಡಬೇಕೆನ್ನುವ ಕನಸಿನ ಇವರು, ಇದಕ್ಕಾಗಿ ನೀಡುತ್ತಿರುವ ಪ್ರಮುಖ ಕಾರಣವೇನೆಂದರೆ ’ಉತ್ತರ ಕರ್ನಾಟಕದಲ್ಲಿ ಅನೇಕ
ಹಿಂದುಳಿದ ಪ್ರದೇಶಗಳಿವೆ, ಇಲ್ಲಿ
ಕೈಗಾರಿಕೆಗಳು ಬೆಳೆದಿಲ್ಲಾ, ನೀರಾವರಿ
ಸರಿಯಾಗಿಲ್ಲಾ, ಶಿಕ್ಷಣ
ಸವಲತ್ತು ಸರಿಯಾಗಿಲ್ಲಾ... ಒಟ್ಟಾರೆ ಏಳಿಗೆಯಾಗಿಲ್ಲಾ’ ಎನ್ನುವುದು. ಇದರಲ್ಲಿ ಕೆಲಮಟ್ಟಿಗೆ ದಿಟವೂ ಇದೆ. ಉತ್ತರ ಕರ್ನಾಟಕದ ಹಲವಾರು ತಾಲ್ಲೂಕುಗಳು ಹಿಂದಿರುವುದನ್ನು
ಡಾ. ನಂಜುಂಡಪ್ಪ ವರದಿಯೂ ಸೇರಿದಂತೆ ಅನೇಕ ವರದಿಗಳಲ್ಲಿ ಹೇಳಲಾಗಿದೆ. ಈ ಹಿಂದುಳಿದಿರುವ
ತಾಲ್ಲೂಕುಗಳ ಏಳಿಗೆಗೆ ವಿಶೇಷ ಅನುದಾನಗಳನ್ನು, ಸಂವಿಧಾನದ
೩೭೧ನೇ ವಿಧಿಯನ್ನು ದೊರಕಿಸಿಕೊಟ್ಟಿರುವುದೂ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು ಯೋಜನೆಗಳು ನಿರೀಕ್ಷಿತ ವೇಗದಲ್ಲಿ ಜಾರಿಯಾಗಿಲ್ಲ ಎಂಬ ದೂರಿದೆ. ಆದರೆ ಈ ಸಮಸ್ಯೆಗೆ ಪರಿಹಾರವಾದರೂ ಏನು ಎಂಬುದು ಎಲ್ಲರೂ ಕೂಡಿ ಯೋಚಿಸಬೇಕಾದ ಸಂಗತಿಯಾಗಿದೆ.
ಉತ್ತರ ಕರ್ನಾಟಕದ ಏಳಿಗೆಗಾಗಿ ಬೇಡಿಕೆ ಇಡುತ್ತಿರುವ ಉಮೇಶ್ ಕತ್ತಿ, ಪ್ರಭಾಕರ್ ಕೋರೆ, ನಡಹಳ್ಳಿಯವರ ಬೇಡಿಕೆಗಳ ನಿಜಾಯಿತಿಯ ಬಗ್ಗೆ ಅನುಮಾನ ಹುಟ್ಟಲು ಅವರು ಇಡುತ್ತಿರುವ ಬೇಡಿಕೆಗಳೇ ಕಾರಣವಾಗುತ್ತಿವೆ. ಒಬ್ಬರು ಪ್ರತಿಷ್ಟಿತ ಐಐಟಿ ಬೆಳಗಾವಿಗೆ ಬರದಿದ್ದರೆ ಪ್ರತ್ಯೇಕ ರಾಜ್ಯ ಕೇಳುತ್ತೇವೆ ಎಂದಿದ್ದರೆ, ನಡಹಳ್ಳಿಯವರು
ಇಟ್ಟಿರುವ ಬೇಡಿಕೆಯಾದರೂ ಹೇಗಿದೆ ನೋಡಿ. ಇಡೀ ರಾಜ್ಯದ ಬಜೆಟ್ಟಿನ ೭೦% ಹಣವನ್ನು ಪ್ರತಿವರ್ಷ ಈ
ಹದಿಮೂರು ಜಿಲ್ಲೆಗಳ ಏಳಿಗೆಗಾಗಿ ನೀಡಬೇಕಂತೆ. ಇಡೀ ಕರ್ನಾಟಕದ ಒಟ್ಟು ಆದಾಯದ ೫೧% ಬರುವುದು
ಬೆಂಗಳೂರಿನಿಂದ, ದಕ್ಷಿಣ
ಕರ್ನಾಟಕದಿಂದ ಬರುವ ಒಟ್ಟೂ ಆದಾಯ ಸುಮಾರು ೭೧%. ಈ ಭಾಗದ ಜನಸಂಖ್ಯೆಯೂ ಸರಿಸುಮಾರು ಅಷ್ಟೇ ಇದೆ.
ಅಂದರೆ ಕರ್ನಾಟಕದ ೬.೧೧ ಕೋಟಿ ಜನಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಜನಸಂಖ್ಯೆ ೪೨% ಇದೆ. ಅಂದರೆ
ದಕ್ಷಿಣ ಕರ್ನಾಟಕದಿಂದ ಹುಟ್ಟುವ ಅಷ್ಟೂ ಆದಾಯದಲ್ಲಿ ಅರ್ಧದಷ್ಟನ್ನು ಉತ್ತರ ಕರ್ನಾಟಕಕ್ಕೆ
ಮೀಸಲಿಡಿ ಎನ್ನುವುದು ನ್ಯಾಯವಾದ ಕಾರ್ಯಸಾಧುವಾದ ಬೇಡಿಕೆಯೇ? ಅದೂ
ಮುಂದಿನ ಇಪ್ಪತ್ತು ವರ್ಷಗಳ ಕಾಲ ಹೀಗೆ ಮಾಡಬೇಕಂತೆ. ಇಲ್ಲದಿದ್ದರೆ ಪ್ರತ್ಯೇಕ ರಾಜ್ಯಕ್ಕೆ
ಹೋರಾಟ ಮಾಡುತ್ತಾರಂತೆ. ಅಂದರೆ ಎಂದಿಗೂ ಈಡೇರಿಸಲು ಸಾಧ್ಯವಾಗದ ಬೇಡಿಕೆಯನ್ನು ಮುಂದುಮಾಡಿ, ಇದು ಈಡೇರದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ
ಮಾಡುತ್ತೇವೆ ಎನ್ನುವ ಮಾತಿನ ಹಿಂದಿರುವ ಹುನ್ನಾರ ಏನು ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಇಲ್ಲದಿದ್ದರೆ ಬೇರೆ ಬೇರೆ ಮೂವತ್ತು ಸಂಸ್ಥೆಗಳನ್ನು ಈಗಿರುವುದಕ್ಕೆ ಪ್ರತಿಸ್ಪರ್ಧಿಯಾಗುವಂತೆ ಕಟ್ಟುವ ಮಾತೇಕೆ ಆಡುತ್ತಿದ್ದರು? ಸದರಿ ಸಂಸ್ಥೆಗಳಿಗೂ ಏಳಿಗೆಯ ಬೇಡಿಕೆಗೂ ಏನು ಸಂಬಂಧ? ಈಗಾಗಲೇ ಇವರೇ ತಿಳಿಸಿರುವಂತೆ ಬೇರೆ ರಾಜ್ಯ ಮಾಡಲು ಇವೆಲ್ಲಾ ನೆಪ. ಇಂತಹ ಒಡಕಿಗೆ ಬೆಂಬಲ ಗಿಟ್ಟಿಸಲು "ನಮಗೆ ಅನ್ಯಾಯವಾಗುತ್ತಿದೆ" ಎಂದು ಹುಯಿಲೆಬ್ಬಿಸುವುದು ಅಸ್ತ್ರ. 
ವಾಸ್ತವದಲ್ಲಿ ಪ್ರತ್ಯೇಕ ರಾಜ್ಯವಾಗುವುದು ಉತ್ತರ ಕರ್ನಾಟಕದ ಭಾಗದ ಜನರಿಗೆ ಹೇಗೆ ಒಳಿತನ್ನು ಮಾಡುತ್ತದೆ ಎಂಬ ಬಗ್ಗೆ ಈ ನಾಯಕರುಗಳ ಬಳಿ ಯಾವ ಯೋಜನೆಯಿದೆ ಎಂಬುದು ಜಾಹೀರಾಗಿಲ್ಲ. ಹೇಗೆ ಸಂಪನ್ಮೂಲಗಳನ್ನು ತರಲಾಗುತ್ತದೆ, ಹೇಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುತ್ತದೆ, ಹೇಗೆ ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಿಸಲಾಗುತ್ತದೆ, ಹೇಗೆ ಇಲ್ಲಿಗೆ ಉದ್ದಿಮೆಗಳನ್ನು ತರಲಾಗುತ್ತದೆ, ಹೇಗೆ ನೀರಾವರಿ ಯೋಜನೆಗಳನ್ನು ಪೂರೈಸಲಾಗುತ್ತದೆ, ಹೇಗೆ ಉದ್ಯೋಗಾವಕಾಶ ಹುಟ್ಟುಹಾಕಲಾಗುತ್ತದೆ ಮತ್ತು ಎಲ್ಲಕ್ಕಿಂತಾ ಮಿಗಿಲಾಗಿ ಪ್ರತ್ಯೇಕ ರಾಜ್ಯವಾಗುವುದು ಹಿಂದುಳಿದಿರುವಿಕೆಗೆ ಹೇಗೆ ಪರಿಹಾರ ಎಂಬುದನ್ನು ಜನರು ಕೇಳಬೇಕಾಗಿದೆ.

ವಾಸ್ತವದಲ್ಲಿ ಪ್ರತ್ಯೇಕ ರಾಜ್ಯವಾಗುವುದು ಉತ್ತರ ಕರ್ನಾಟಕದ ಭಾಗದ ಜನರಿಗೆ ಹೇಗೆ ಒಳಿತನ್ನು ಮಾಡುತ್ತದೆ ಎಂಬ ಬಗ್ಗೆ ಈ ನಾಯಕರುಗಳ ಬಳಿ ಯಾವ ಯೋಜನೆಯಿದೆ ಎಂಬುದು ಜಾಹೀರಾಗಿಲ್ಲ. ಹೇಗೆ ಸಂಪನ್ಮೂಲಗಳನ್ನು ತರಲಾಗುತ್ತದೆ, ಹೇಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುತ್ತದೆ, ಹೇಗೆ ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಿಸಲಾಗುತ್ತದೆ, ಹೇಗೆ ಇಲ್ಲಿಗೆ ಉದ್ದಿಮೆಗಳನ್ನು ತರಲಾಗುತ್ತದೆ, ಹೇಗೆ ನೀರಾವರಿ ಯೋಜನೆಗಳನ್ನು ಪೂರೈಸಲಾಗುತ್ತದೆ, ಹೇಗೆ ಉದ್ಯೋಗಾವಕಾಶ ಹುಟ್ಟುಹಾಕಲಾಗುತ್ತದೆ ಮತ್ತು ಎಲ್ಲಕ್ಕಿಂತಾ ಮಿಗಿಲಾಗಿ ಪ್ರತ್ಯೇಕ ರಾಜ್ಯವಾಗುವುದು ಹಿಂದುಳಿದಿರುವಿಕೆಗೆ ಹೇಗೆ ಪರಿಹಾರ ಎಂಬುದನ್ನು ಜನರು ಕೇಳಬೇಕಾಗಿದೆ.
ಕರ್ನಾಟಕದ
ಜನರು ಮನೆ ಮನ ಒಡೆಯುವ ಇಂಥಾ ಮಾತುಗಳಿಗೆ ಮರುಳಾಗದೆ ನಿಜಾಂಶಗಳನ್ನು ತೂಗಿನೋಡಬೇಕಾಗಿದೆ. ಒಂದು
ನಾಡಿನ ಜನರ ಏಳಿಗೆಗಿಂತಲೂ ಮಿಗಿಲಾದುದು ಇನ್ನೊಂದಿಲ್ಲ. ಜನರ ಶಿಕ್ಷಣ, ದುಡಿಮೆ - ಆ ಮೂಲಕ ಏಳಿಗೆ ಮತ್ತು ನೆಮ್ಮದಿಯ
ಬದುಕಿನ ಪರಮೋದ್ದೇಶಕ್ಕಾಗೇ ನಾಡು, ವ್ಯವಸ್ಥೆ, ರಾಜ್ಯ, ದೇಶ, ಭಾಷೆಗಳನ್ನು ಮನುಷ್ಯ ಕಟ್ಟಿಕೊಂಡಿರುವುದು.
ಭಾವನಾತ್ಮಕವಾದ ವಿಷಯವೊಂದಕ್ಕಾಗಿ ಏಳಿಗೆಯನ್ನು ತ್ಯಾಗ ಮಾಡಿ ಎನ್ನುವ ಮಾತನ್ನು ಯಾರೂ
ಒಪ್ಪಬೇಕಾದ್ದಿಲ್ಲ. ಈಗ ಉತ್ತರ ಕರ್ನಾಟಕ ಹಿಂದುಳಿಯಲು ಕಾರಣಗಳೇನು, ಏಕೀಕರಣವಾದ ನಂತರ ಆಗಿರುವ ಬೆಳವಣಿಗೆಯ ಪ್ರಮಾಣವೇನು, ಇಷ್ಟು ವರ್ಷಗಳ ಕರ್ನಾಟಕದ ಆಳ್ವಿಕೆಯಲ್ಲಿ ಈ
ಭಾಗದ ಅದೆಷ್ಟು ನಾಯಕರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ, ಎಷ್ಟು
ಯೋಜನೆಗಳನ್ನು ಇಲ್ಲಿಗೆ ತಂದಿದ್ದಾರೆ, ಇಂದಿಗೂ
ಹಿಂದುಳಿದಿರುವ ಪರಿಸ್ಥಿತಿಗೆ ಇಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅದೆಷ್ಟು ಕಾರಣ
ಎಂಬುದನ್ನೆಲ್ಲಾ ಅರಿಯಬೇಕಾಗಿದೆ.
ಜೊತೆಗೆ
ಈ ಮಂದಿ ಪ್ರತಿಪಾದಿಸುತ್ತಿರುವ ಪ್ರತ್ಯೇಕ ರಾಜ್ಯವು ಹೇಗೆ ಏಳಿಗೆಯನ್ನು ತಂದುಕೊಡಲಿದೆ, ಈ ಭಾಗಕ್ಕೆ ಸಂಪನ್ಮೂಲದ ಕ್ರೋಡೀಕರಣ ಎಲ್ಲಿಂದ, ಹೇಗೆ ಹೊಂದಿಸಲಾಗುತ್ತದೆ ಎಂಬುದನ್ನು
ಯೋಚಿಸಬೇಕಾಗಿದೆ. ಈಗ ಒಗ್ಗೂಡಿದ ಕರ್ನಾಟಕಕ್ಕೆ ಯೋಜನೆಗಳನ್ನು ತರಬೇಕಾದಾಗಲಾಗಲೀ, ನಮ್ಮ ನಾಡಿನ ಸಮಸ್ಯೆಗಳನ್ನು ಸಂಸತ್ತಿನಲ್ಲಿ
ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲಾಗಲೀ.. ಇಡಿಯ ಕರ್ನಾಟಕದಿಂದ ದೆಹಲಿಗೆ ಹೋಗಿರುವ ಲೋಕಸಭೆಯ ೨೮
ಸದಸ್ಯರು + ರಾಜ್ಯಸಭೆಯ ೧೨ ಸಂಸದರು ತಿಣುಕುತ್ತಿರುವುದನ್ನು ನೋಡುತ್ತಿದ್ದೇವೆ. ಅಂಥದ್ದರಲ್ಲಿ
ರಾಜ್ಯ ಹೋಳಾಗಿ ಸಂಸದರ ಸಂಖ್ಯೆ ೧೦-೧೨ಕ್ಕೆ ಇಳಿದರೆ ನಮ್ಮ ಯಾವ ಮಾತು ದೆಹಲಿಯಲ್ಲಿ ನಡೆದೀತು
ಎಂಬುದನ್ನು ಯೋಚಿಸಬೇಕಾಗಿದೆ. ಇಷ್ಟೂ ವರ್ಷಗಳ ಕಾಲ ಉತ್ತರ ಕರ್ನಾಟಕವನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳು
ಅಲ್ಲಿನ ಇಂದಿನ ಪರಿಸ್ಥಿತಿಯಲ್ಲಿ ಪಾಲುದಾರರಾಗಿದ್ದಾರೆ ಎನ್ನುವುದನ್ನು ಅರಿತರೆ ನಾಳೆ ಅವರಿಂದಲೇ
ಆಳಿಸಿಕೊಳ್ಳುವ ಪುಟ್ಟ ಪ್ರತ್ಯೇಕ, ಕಡಿಮೆ
ಸಂಪನ್ಮೂಲದ, ಕಡಿಮೆ ಸಂಸದರ ರಾಜ್ಯವೊಂದು ಏಳಿಗೆಯ ಕನಸು
ಕಾಣಲಿಕ್ಕಾದರೂ ಆದೀತೆ ಎಂಬುದನ್ನು ಯೋಚಿಸಬೇಕಾಗಿದೆ.
ಪ್ರತ್ಯೇಕ
ರಾಜ್ಯದ ಒಡಕಿನ ದನಿ ಎತ್ತುವ ಮಂದಿ, "ನಾವೆಲ್ಲಾ ಒಂದೇ" ಎನ್ನುವ ಕನ್ನಡಿಗರ ನಡುವೆ "ಉತ್ತರದವರೇ ಬೇರೆ, ದಕ್ಷಿಣದವರೇ ಬೇರೆ" ಎನ್ನುವ ಭಿನ್ನತೆಯನ್ನು ಕೃತಕವಾಗಿ ಹುಟ್ಟುಹಾಕುವ ಮೂಲಕ
ಪರಸ್ಪರ ಅಪನಂಬಿಕೆ, ದ್ವೇಷಾಸೂಯೆಗಳನ್ನು ಹುಟ್ಟುಹಾಕುತ್ತಿಲ್ಲವೇ? ಒಟ್ಟಾರೆಯಾಗಿ
ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿಯದೆ ತಮ್ಮ ಸ್ವಾರ್ಥಕ್ಕಾಗಿಯೋ ಮತ್ತೊಂದಕ್ಕಾಗಿಯೋ
ಕರ್ನಾಟಕವನ್ನು ಒಡೆಯಬೇಕೆಂದು ಕನಸು ಕಾಣುತ್ತಿರುವ ಮಂದಿಯ ಹುಚ್ಚುತನಕ್ಕೆ ನಾಡಜನತೆ
ಮರುಳಾಗದಿರುವುದು ಕನ್ನಡ, ಕರ್ನಾಟಕ
ಮತ್ತು ಕನ್ನಡಿಗರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
- ಆನಂದ್

