Thursday, September 10, 2015

ನಿಲ್ಲಲಿ ಹಿಂದೀ ಹೇರಿಕೆ... ಕೊನೆಯಾಗಲಿ ಭಾಷಾ ತಾರತಮ್ಯ


ಪ್ರತಿವರ್ಷದಂತೆ ಕೇಂದ್ರ ಸರ್ಕಾರವು ಈ ಬಾರಿಯೂ ಸಹ ಸೆಪ್ಟೆಂಬರ್ ಹದಿನಾಲ್ಕರಂದು 'ಹಿಂದಿ ದಿವಸ'ವನ್ನಾಗಿ ಆಚರಿಸುತ್ತದೆ. ಭಾರತದಂತಹ ವೈವಿಧ್ಯತೆಯ ದೇಶದಲ್ಲಿ ಕೇವಲ ಒಂದು ಭಾಷೆಗೆ ಮಾತ್ರ ವಿಶೇಷದಿನವನ್ನಾಗಿ ಆಚರಿಸುವುದರ ಹಿಂದಿನ ಸತ್ಯಗಳನ್ನು ಕೆದಕುತ್ತಾ ಹೋದರೆ ಕೇಂದ್ರ ಸರ್ಕಾರವು ಪಾಲಿಸುತ್ತಿರುವ ಹುಳುಕಿನ ಭಾಷಾ ನೀತಿಯ ಕರಾಳ ಮುಖಗಳು ನಮಗೆ ಕಂಡು ಬರುತ್ತವೆ. ಕೆಲ ಕನ್ನಡಿಗರಿಗೆ ಹಿಂದಿಯು ರಾಷ್ಟ್ರಭಾಷೆ ಹಾಗಾಗಿ ಅದನ್ನು ಕಲಿಯಬೇಕು ಪೋಷಿಸಬೇಕು ಎಂಬ ಭಾವನೆಯಿದೆ. ಮೊದಲನೆಯದಾಗಿ ಹಿಂದಿ ರಾಷ್ಟ್ರಭಾಷೆ ಎಂಬುದು ನಿಜವಲ್ಲ, ನಮ್ಮ ದೇಶದ ಸಂವಿದಾನದಲ್ಲಿ ಯಾವುದೇ ನುಡಿಗೆ ರಾಷ್ಟ್ರಭಾಷೆಯ ಮನ್ನಣೆ ಕೊಟ್ಟಿಲ್ಲ. ಇದನ್ನು ಗುಜರಾತ್ ಹೈಕೋರ್ಟ್ ಸಹ 2010ರಲ್ಲಿ ತನ್ನ ತೀರ್ಪೊಂದರಲ್ಲಿ ಸ್ಪಷ್ಟವಾಗಿ ಹೇಳಿದೆ.

ಆದರೆ ಕೇಂದ್ರ ಸರ್ಕಾರವು ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಪಾಲಿಸುವಂತೆ ಮಾಡುವ ಮೂಲಕ ಹಿಂದಿಯನ್ನು ರಾಷ್ಟ್ರಭಾಷೆಯೆಂಬಂತೆ ಬಿಂಬಿಸುತ್ತಲೇ ಇದೆ. ಕೇಂದ್ರ ಸರ್ಕಾರವು ರಾಜಭಾಷಾ ಆಯೋಗದ ಮೂಲಕ ಹಿಂದಿಯನ್ನು ಕರ್ನಾಟಕದಂತಹ ಹಿಂದಿಯೇತರ ರಾಜ್ಯಗಳ ಮೇಲೆ ನಿರಂತರವಾಗಿ ಹೇರಿಕೆ ಮಾಡುತ್ತಿದೆ. ಹಿಂದಿಯನ್ನು ಪ್ರಚಾರ ಮಾಡುವುದಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಹಾಕುತ್ತಾ, ಕೇಂದ್ರ ಸರ್ಕಾರವು ತನ್ನ ಕೈ ಕೆಳಗೆ ಇರುವ ಸರ್ಕಾರಿ ಸಂಸ್ಥೆಗಳನ್ನು ಇದಕ್ಕಾಗಿ ಬಳಸುತ್ತಿದೆ ಹಾಗೂ ಇದೇ ಉದ್ದೇಶಕ್ಕಾಗಿ ಕೋಟಿಗಟ್ಟಲೆ ಹಣವನ್ನು ಸಹ ಒದಗಿಸುತ್ತಿದೆ. ಇಂತಹ ಸತತ ಪ್ರಯತ್ನಗಳಿಂದ ಕೆಲವು ಕನ್ನಡಿಗರು ಹಿಂದಿಯು ರಾಷ್ಟ್ರಭಾಷೆ ಹಾಗಾಗಿ ಅದನ್ನು ಕಲಿಯಬೇಕು ಪೋಷಿಸಬೇಕು ಎಂಬ ಭಾವನೆಯನ್ನು ತೆಳೆದಿದ್ದಾರೆ. ಇಲ್ಲದೇ ಹೋದಲ್ಲಿ ಕನ್ನಡಿಗರಿಗೆ ಪಕ್ಕದ ರಾಜ್ಯದ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂಗಿಂತ ಹೆಚ್ಚಿನ ಸಂಪರ್ಕವು ದೂರದ ಹಿಂದಿಯೊಡನೆ ಹೊಂದಲು ಸಾದ್ಯವಾದುದಾರೂ ಹೇಗೆ?

ದೇಶದೆಲ್ಲೆಡೆ ಒಂದೇ ಭಾಷೆಯಾದರೆ ಅದು ಒಗ್ಗಟ್ಟಿಗೆ ಪೂರಕವಲ್ಲವೇ ಎಂದು ಹೇಳುವವರೂ ಇದ್ದಾರೆ ಆದರೆ ಇದು ಹೇಗೆ ಮಾರಕ ಎಂಬುದನ್ನು ಎರಡು ವರ್ಷದ ಹಿಂದೆ ಯುಪಿಎಸ್ಸಿಯು (Union Public service commission) ತನ್ನ ಪರೀಕ್ಷೆಗಳಿಗೆ ಮಾಡಲು ಬಯಸಿದ್ದ ಕೆಲವು ಬದಲಾವಣೆಗಳ ಹಿನ್ನೆಲೆಯಲ್ಲಿ ನೋಡಬಹುದಾಗಿದೆ. ಯುಪಿಎಸ್ಸಿ ಮಾಡಬಯಸಿದ್ದ ಬದಲಾವಣೆಗಳು, ಹಿಂದಿ ಅರಿಯದ, ಕನ್ನಡವನ್ನು ಪರಿಸರದ ನುಡಿಯನ್ನಾಗಿ ಹೊಂದಿರುವ ಅಭ್ಯರ್ಥಿಗಳಿಗೆ ಮಾರಕವಾಗುವಂತಿದ್ದವು. ಕನ್ನಡಿಗರಿಗೆ ಕನ್ನಡವನ್ನು ಒಂದು ವಿಷಯವನ್ನಾಗಿ ತೆಗೆದುಕೊಳ್ಳಲು ಬೇಷರತ್ತಾದ ಅಯ್ಕೆ ಇಲ್ಲದಿರುವುದು, ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆ ಬರೆಯುವ ಅವಕಾಶ ಸಿಗಲು ಕನಿಷ್ಟ ಇಷ್ಟು ಜನರಿರಲೇಬೇಕು ಎಂಬ ಷರತ್ತು ವಿಧಿಸುವುದು, ಇವೆಲ್ಲವೂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಚಿಗುರೊಡೆಯುತ್ತಿರುವ ಪ್ರತಿಬೆಗಳು ಐ.ಎ.ಎಸ್ ಪರೀಕ್ಶೆ ಎದುರಿಸಲಾರದಂತೆ ಮಾಡಿಹಾಕುತ್ತಿತ್ತು. ಹಿಂದಿ ಭಾಷಿಕರಿಗೆ ಈ ಯಾವುದೇ ಷರತ್ತುಗಳು ಇಲ್ಲದಿರುವುದು ಕೇಂದ್ರ ಸರ್ಕಾರದ ಹಿಂದಿಯೇತರ ಭಾಷಿಕರ ವಿರೋಧಿ ನಿಲುವನ್ನು ತೋರಿಸುತ್ತಿತ್ತು. ಕೆಲವು ಕನ್ನಡಪರ ಸಂಘಟನೆಗಳನ್ನು ಹೊರತುಪಡಿಸಿ, ಬೇರೆ ಯಾವ ಕನ್ನಡಿಗ ಸಂಸದರೂ ಸಹ ಈ ಬಗ್ಗೆ ಸೊಲ್ಲೆತ್ತಲ್ಲಿಲ್ಲ. ಆದರೆ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜಕಾರಾಣಿಗಳು ಹೋರಾಡಿದ್ದರಿಂದ ಯುಪಿಎಸ್ಸಿಯು ಈ ಬದಲಾವಣೆಗಳನ್ನು ಕೈಬಿಟ್ಟಿತು.

ಕೇಂದ್ರ ಸರ್ಕಾರವು ಮೊದಲಿನಿಂದಲೂ ಹಿಂದಿ ಭಾಷಿಕರಿಗೆ ಹೆಚ್ಚಿನ ಸ್ಥಾನಮಾನವನ್ನು ಕೊಡುತ್ತಾ ಬಂದಿದೆ. ವಿಶ್ವಸಂಸ್ಥೆಯ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಅಂಗೀಕರಿಸುವ ಪ್ರಯತ್ನಕ್ಕೆ ಈಗಿನ ಸರ್ಕಾರ ಕೈಹಾಕಿರುವುದೂ ಸಹ ವರದಿಯಾಗಿದೆ. ಕೇಂದ್ರ ಸರ್ಕಾರ ನಡೆಸುವ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ ಅಥವಾ ಇಂಗ್ಲಿಶ್‍ನಲ್ಲಿ ಮಾತ್ರ ಲಭ್ಯ. ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳ ಕಥೆ ಒಂದೆಡೆಯಾದರೆ ಕೇಂದ್ರ ಸರ್ಕಾರದ ಕೈಕೆಳಗೆ ಕೆಲಸ ನಿರ್ವರ್ಹಿಸುವ ಇಲಾಖೆಗಳು ಸಹ ನಿರಂತರವಾಗಿ ಹಿಂದಿ ಬಳಕೆಯನ್ನು ಹೆಚ್ಚಿಸುತ್ತಿವೆ, ಇದಕ್ಕಾಗಿ ಹಿಂದಿಯೇತರರು ಅಪಾರವಾದ ಬೆಲೆ ತೆರಬೇಕಾಗಿದೆ. ಎಲ್.ಪಿ.ಜಿ. ಸಿಲಿಂಡರುಗಳ ಮೇಲೆ ಕೇವಲ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಸೂಚನೆಗಳನ್ನು ಕೊಡಲಾಗುತ್ತದೆ, ಇತ್ತೀಚೆಗೆ ನಡೆಯುತ್ತಿರುವ ಗ್ಯಾಸ್ ಅಪಘಾತಗಳ ಹಿನ್ನೆಲೆಯಲ್ಲಿ ಇದನ್ನು ನೋಡಿದಾಗ ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬುದು ನಮಗೆ ಅರಿವಾಗುತ್ತದೆ. ಇನ್ನು ಬ್ಯಾಂಕುಗಳಲ್ಲಿ, ರೈಲ್ವೇ ಸೇವೆ, ಅಂಚೆಕಚೇರಿ ಮೊದಲಾದಲ್ಲೆಲ್ಲಾ ಕನ್ನಡವನ್ನು ಕಡೆಗಣಿಸಿ ಹಿಂದಿಯನ್ನು ತುರುಕಲಾಗುತ್ತಿದೆ. ಇದಕ್ಕೆಲ್ಲಾ ಭಾರತದ ಹುಳುಕಿನ ಭಾಷಾ ನೀತಿಯೇ ಕಾರಣವಾಗಿದೆ.

ಹೀಗೆ ಹಿಂದಿಗೆ ವಿಶೇಷ ಸವಲತ್ತುಗಳನ್ನು ಕೊಡಮಾಡುವ ಭಾಷಾನೀತಿಯಿರುವ ಕಾರಣ ಹಿಂದಿಯೇತರರ ಭಾಷಿಕ ಹಕ್ಕುಗಳನ್ನು ಧಮನಿಸುವ ಪ್ರಯತ್ನಗಳು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲೇ ನಡೆಯುತ್ತಿರುವುದು ಸಮಾನತೆಯೇ ಜೀವಾಳವಾಗಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕಿಯಿದ್ದಂತೆ. ದೇಶದ ಎಲ್ಲಾ ಭಾಷಿಕರಿಗೂ ಸಮಾನ ಗೌರವ ಮತ್ತು ಸಮಾನ ಅವಕಾಶ ಕೊಡಮಾಡುವುದರ ಮೂಲಕ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಇನ್ನೂ ಶಕ್ತಿಶಾಲಿಯಾಗಿಸಬಹುದು. ಯುರೋಪು ಒಕ್ಕೂಟವು ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ, ಯುರೋಪ್ ಒಕ್ಕೂಟದ ಸಂಸತ್ತಿನಲ್ಲಿ ಎಲ್ಲಾ ಇಪ್ಪತ್ತಮೂರು ಭಾಷೆಗಳನ್ನು ಬಳಸಬಹುದಾಗಿದೆ, ತನ್ನೆಲ್ಲಾ ವ್ಯವಹಾರಗಳನ್ನು ತನ್ನ ನುಡಿಯಲ್ಲೇ ನಡೆಸುವ ಅವಕಾಶ ಯುರೋಪಿನ ಒಕ್ಕೂಟದ ಪ್ರಜೆಗಳಿಗೆ ಇದೆ. ಆದರೆ ಭಾರತದ ಸಂಸತ್ತಿನಲ್ಲಿ ಇತ್ತೀಚೆಗೆ ತನ್ನ ತಾಯಿನುಡಿಯಾದ ತೆಲುಗಿನಲ್ಲಿ ಮಾತನಾಡಿದ ಟಿಡಿಪಿ ಪಕ್ಷದ ಸದಸ್ಯರೊಬ್ಬರನ್ನು ಬಹಿರಂಗವಾಗಿ ಅಪಹಾಸ್ಯಕ್ಕೀಡುಮಾಡಲಾಗಿತ್ತು. ಇಂದಿಗೂ ರಾಜ್ಯಗಳ ಹೈಕೋರ್ಟುಗಳಲ್ಲಿ ಕೇವಲ ಹಿಂದಿ ಅಥವಾ ಇಂಗ್ಲಿಷನ್ನು ಬಳಸಬಹುದಾಗಿದ್ದು ರಾಜ್ಯದ ಭಾಷೆಗಳನ್ನು ಬಳಸುವ ಅವಕಾಶವಿಲ್ಲವಾದ್ದರಿಂದ ತನ್ನ ನುಡಿಯಲ್ಲೇ ನ್ಯಾಯದಾನವನ್ನು ಪಡೆಯುವ ಹಕ್ಕಿನಿಂದ ಹಿಂದಿಯೇತರರು ವಂಚಿತರಾಗಿದ್ದಾರೆ. ಚನ್ನೈನ ಹೈಕೋರ್ಟಿನಲ್ಲಿ ತಮಿಳು ಬಳಕೆಗೆ ಅವಕಾಶಕೊಡಬೇಕೆಂದು ಒತ್ತಾಯಿಸಿ ಕೆಲ ತಿಂಗಳುಗಳ ಹಿಂದೆ ನ್ಯಾಯವಾದಿಗಳು ಕಲಾಪವನ್ನು ಬಹಿಷ್ಕರಿಸಿದ ಘಟನೆಯನ್ನು ಇಲ್ಲಿ ನೆನೆಯಬಹುದು.

  ರಾಜ್ಯದ ರಾಜಕಾರಣಿಗಳು ಈಗಲಾದರೂ ತಮ್ಮ ಮೌನ ಮುರಿದು ಕನ್ನಡಿಗರ ಹಿತಕಾಯುವ ಕೆಲಸಕ್ಕೆ ಮುಂದಾಗಬೇಕು ಈ ರೀತಿಯ ಭಾಷಾ ತಾರತಮ್ಯವನ್ನು ವಿರೋಧಿಸಬೇಕು. ಭಾರತೀಯ ಸಂವಿದಾನ ಅನುಮೋದಿಸಿರುವ ಎಲ್ಲಾ ಭಾಷೆಗಳಿಗೂ ಸಹ ಸಮಾನ ಹಕ್ಕುಗಳು ಸಿಗಬೇಕು.  ಇಲ್ಲದೇ ಹೋದಲ್ಲಿ ನಮ್ಮ ನೆಲದಲ್ಲೇ ಎರಡನೆಯ ದರ್ಜೆಯ ಪ್ರಜೆಯಾಗಿ ಬದುಕುವ ಬೇಡದ ಕರ್ಮ ಕನ್ನಡಿಗರದ್ದಾಗಲಿದೆ.

- ಗಿರೀಶ್ ಕಾರ್ಗದ್ದೆ

Wednesday, June 24, 2015

ಕನ್ನಡಿಗರು ತೀರ್ಮಾನ ಮಾಡಬೇಕಾದ್ದು....



ಇತ್ತೀಚಿಗೆ ಉತ್ತರ ಕರ್ನಾಟಕದ ಏಳಿಗೆಗಾಗಿ ಜನಜಾಗೃತಿ ಮಾಡುತ್ತೇವೆ ಎಂದು ಹೇಳುತ್ತಾ, ದೇವರ ಹಿಪ್ಪರಗಿ ಶಾಸಕರಾದ ಶ್ರೀ ನಡಹಳ್ಳಿ ಎ. ಎಸ್ ಪಾಟೀಲರು ವಿಜಯಪುರದಿಂದ ರಾಯಚೂರಿಗೆ ಪಾದಯಾತ್ರೆ ಯೋಜಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗಿಗೆ ಆಂದೋಲನದ ರೂಪ ನೀಡಲು ಮುಂದಾಗಿದ್ದಾರಂತೆ.

ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದ ಉದ್ದಗಲಕ್ಕೂ ಹಿಂದುಳಿದ ತಾಲ್ಲೂಕುಗಳಿದ್ದು ಈ ಎಲ್ಲಾ ತಾಲ್ಲೂಕುಗಳ ಏಳಿಗೆಯ ಬಗ್ಗೆ ಯಾರೇ ಮಾತಾಡುವುದು ಪ್ರಬುದ್ಧ ನಡೆಯಾಗುತ್ತದೆ. ಉತ್ತರದ ಹತ್ತು ಜಿಲ್ಲೆಯ ಹಿಂದುಳಿದಿರುವಿಕೆಯ ಬಗ್ಗೆ ಮಾತ್ರಾ ಯೋಚಿಸುವುದಕ್ಕಿಂತಲೂ ಎಲ್ಲೆಡೆಯ ಹಿಂದುಳಿದ ತಾಲ್ಲೂಕುಗಳ ಬಗ್ಗೆ ಕಾಳಜಿ ತೋರಿಸುವುದು ಮೇಲ್ಮಟ್ಟದ ಯೋಚನೆ ಎನ್ನುವುದೇ ದಿಟವಾಗಿದ್ದರೂ ಕನ್ನಡ ಜನತೆ ಸದ್ಯ ಈ ಆಂದೋಲನದ ಬಗ್ಗೆ ಯೋಚಿಸಬೇಕಾಗಿದೆ.

ಕರ್ನಾಟಕದ ಉತ್ತರ ಭಾಗದ ಹಲವು ತಾಲ್ಲೂಕುಗಳು ಹಿಂದುಳಿದಿರಲು, ಆ ಭಾಗದ ಪರಾಡಳಿತದ ಇತಿಹಾಸ ಮತ್ತು ಇಂದಿನ ರಾಜಕಾರಣಿಗಳೇ ಮುಖ್ಯಕಾರಣ ಎಂಬ ವಾಸ್ತವವನ್ನು ನಾವೆಲ್ಲಾ ತಿಳಿಯಬೇಕಾಗಿದೆ. ಅಂತೆಯೇ ಈಗ ಕನ್ನಡಿಗರು ಈಗ  ನಾವು ಏನು ಮಾಡಿದರೆ ಹಿಂದುಳಿದ ಭಾಗಗಳ ಏಳಿಗೆಯಾದೀತು ಎಂದು ವಿವೇಕದಿಂದ ಯೋಚಿಸಿ ಹಾಗೆ ನಡೆಯುವುದನ್ನು ಮಾಡಬೇಕಾಗಿದೆ.

ಭಾರತದಂತಹ ಹುಸಿ ಒಕ್ಕೂಟದಲ್ಲಿ, ರಾಜ್ಯಗಳ ಅಸಮಾನ ಪ್ರತಿನಿಧಿ ವ್ಯವಸ್ಥೆ ಇರುವಲ್ಲಿ, ಒಂದು ರಾಜ್ಯದ ಸಂಸದರ ಸಂಖ್ಯೆಯೇ ಅದರ ಹಣೆಬರಹ ತೀರ್ಮಾನಿಸುತ್ತದೆ ಎಂಬ ಏರ್ಪಾಟಿನಲ್ಲಿ ನಾವಿರುವಾಗ ಇಡಿಯ ಕರ್ನಾಟಕವನ್ನು ಒಂದಾಗಿ ಉಳಿಸಿಕೊಳ್ಳುವುದರಲ್ಲೇ ನಮ್ಮ ಏಳಿಗೆಯಿದೆ. ಉತ್ತರದವರು, ದಕ್ಷಿಣದ ಮಂದಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಹುಸಿ ಆರೋಪದ ಪ್ರಚಾರವನ್ನು ಕುರುಡಾಗಿ ನಂಬದೆ ತಾಳೆ ಹಾಕಿ ನೋಡಬೇಕಾಗಿದೆ. ಕರ್ನಾಟಕದ ಪ್ರತಿ ನೂರು ರೂಪಾಯಿ ಆದಾಯದಲ್ಲಿ 71 ರೂಪಾಯಿ ಬರುವುದು ಬೆಂಗಳೂರು, ಮೈಸೂರು ವಿಭಾಗದಿಂದ. ಉತ್ತರದ ಭಾಗದಿಂದ ಹುಟ್ಟುವುದು 29%ದಷ್ಟು. ಕರ್ನಾಟಕದ ಒಟ್ಟು ಜನಸಂಖ್ಯೆಯ 42% ಇರುವ ಉತ್ತರದ ಭಾಗಕ್ಕೆ ಹಂಚಿಕೆಯಾಗುವುದು ಸುಮಾರು 60 ರೂಪಾಯಿಯಷ್ಟು. ನಾಳೆ ಬೇರೆ ಹೋಗುವುದರಿಂದ ಈ ಆದಾಯದ ಮೂಲ ಅರ್ಧಕ್ಕೆ ಇಳಿಯುವುದಿಲ್ಲವೇ? ಅಂದರೆ ಈಗಿನ ಹಂಚಿಕೆಗಿಂತಾ ಕಡಿಮೆ ಆದಾಯ ಬರುವುದಾದಲ್ಲಿ ಏಳಿಗೆಯಿಂದ ದೂರಸರಿಯುವುದಲ್ಲದೆ ಎಲ್ಲದಕ್ಕೂ ಕೇಂದ್ರದ ಸಹಾಯಕ್ಕಾಗಿ ಕೈಚಾಚಬೇಕಾಗುತ್ತದೆ. ಅದೇ ರೀತಿಯಲ್ಲಿ ಉತ್ತರದ ಜಿಲ್ಲೆಗಳನ್ನು ಕಳೆದುಕೊಳ್ಳುವ ದಕ್ಷಿಣ ಕರ್ನಾಟಕ ಅನೇಕ ವಿಷಯಗಳಲ್ಲಿ ಬಡವಾಗುತ್ತದೆ. ನೆರೆಯ ತಮಿಳುನಾಡಿನ ಎಐಡಿಎಂಕೆ, ಡಿಎಂಕೆಗಳು ಕೇಂದ್ರಸರ್ಕಾರವನ್ನು ತಮ್ಮ ಸಂಸದರ ಬಲದಿಂದ ಹೇಗೆ ಪ್ರಭಾವಿಸುತ್ತವೆ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯವೇ ಆಗಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಸಹಜವಾದ ನುಡಿಯ ರಾಷ್ಟ್ರೀಯತೆ ಹೊಂದಿರುವ ಕನ್ನಡಿಗರು ಒಂದಾಗಿದ್ದುದ್ದು ಮುಂದೆ ಒಡೆಯುವುದು ನಮ್ಮ ಏಳಿಗೆಗೆ ತೀವ್ರವಾದ ಪೆಟ್ಟು ನೀಡುವುದು ಖಂಡಿತಾ.

ಇನ್ನು ಈಗಾಗಲೇ ಸಂವಿಧಾನದ 371ಜೆ ವಿಧಿಯ ಮೂಲಕ ದೊರೆತಿರುವ ಮತ್ತೊಂದು ಅನುಕೂಲದ ಅನ್ವಯ ಹೈದರಾಬಾದ್ ಕರ್ನಾಟಕ ಭಾಗದ ಮಂದಿಗೆ ಉದ್ಯೋಗ ನೇಮಕಾತಿಯಲ್ಲಿ ರಾಜ್ಯದ ಉಳಿದೆಡೆ ನೂರಕ್ಕೆ ಎಂಟರಷ್ಟು ಮೀಸಲಾತಿ ಸಿಗಲಿದ್ದು ಪ್ರತ್ಯೇಕ ರಾಜ್ಯವಾಗುವುದಾದರೆ ಆ ನಂತರ ಈ ಸವಲತ್ತು ಇಲ್ಲವಾಗುವುದಿಲ್ಲವೇ?

ಜನರ ಮನಸ್ಸಲ್ಲಿ ವೈಷಮ್ಯ ಹುಟ್ಟುಹಾಕಲು ಪ್ರತ್ಯೇಕತೆಯ ಪ್ರತಿಪಾದಕರು ತಾರತಮ್ಯದ ಆರೋಪ ಹೊರಿಸುತ್ತಾರೆ. ನೀರಾವರಿಯಾದ ಪ್ರದೇಶದ ಪ್ರಮಾಣವಾಗಲೀ, ಸಾರಿಗೆ ಸಂಪರ್ಕದಲ್ಲಾಗಲೀ 1956ಕ್ಕೂ ಇಂದಿಗೂ ಸಾಕಷ್ಟು ಏಳಿಗೆಯಾಗಿದೆ. ಅಂಕಿ ಅಂಶಗಳು ಅದಕ್ಕೆ ಪೂರಕವಾಗೇ ಇದೆ. ಉತ್ತರದ ರಾಜಕಾರಣಿಗಳು ಮುಖ್ಯಮಂತ್ರಿಗಳಾಗಿಲ್ಲಾ ಎಂಬ ಪ್ರಚಾರ ಎಷ್ಟು ಹುಸಿಯೆಂದರೆ ಸುಮಾರು ಮೂವತ್ತು ವರ್ಷ ಕಾಲ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆ ಭಾಗದವರಾಗಿದ್ದಾರೆ. ವಾಸ್ತವವಾಗಿ ಬೇರೆಲ್ಲಾ ಕಡೆಯಂತೆಯೇ ನಮ್ಮಲ್ಲಿ ಮುಖ್ಯಮಂತ್ರಿಗಳಾಗಿರುವುದು ಅವರ ಜಾತಿ ವರ್ಗದ ಕಾರಣದಿಂದಲೇ ಹೊರತು ಪ್ರದೇಶದ ಕಾರಣದಿಂದಲ್ಲಾ.

ಏಳಿಗೆಯ ದೃಷ್ಟಿಯಿಂದ 1956ರಲ್ಲಿ ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಸಾಕಷ್ಟು ಅಂತರವಿದ್ದು ಇದೀಗ ದೊಡ್ಡ ಪ್ರಮಾಣದಲ್ಲಿ ಉತ್ತರ ದಕ್ಷಿಣದ ನಡುವಿನ ಅಂತರ ಕಡಿಮೆತಯಾಗಿರುವುದನ್ನು ಈ ಅಂಕಿ ಅಂಶಗಳು ತೋರಿಸುತ್ತಿವೆ. ವಾಸ್ತವವಾಗಿ ತಾರತಮ್ಯ ಆಗಿಲ್ಲಾ ಎನ್ನುವುದನ್ನು ಮನಗಾಣಲು ಹಿಂದುಳಿದ ತಾಲ್ಲೂಕುಗಳು ಉತ್ತರ ದಕ್ಷಿಣ ಎಲ್ಲಾ ಕಡೆ ಸಮನಾಗಿ ಹರಡಿರುವುದೇ ಸಾಕಾಗಿದೆ.

ಈ ಎಲ್ಲಾ ಹೋಲಿಕೆ ಹೇಳಿಕೆಗಳಿಗಿಂತಾ ಮುಖ್ಯವಾದದ್ದು ಹಿಂದುಳಿದ ಭಾಗಗಳು ಮುಂದುವರೆಯಬೇಕು ಎನ್ನುವುದು. ಹೀಗೆ ಆಗಲು ನಾವು ಯಾವುದರಿಂದ ಏಳಿಗೆಯ ಸಾಧ್ಯತೆ ಹೆಚ್ಚಾಗಿದೆಯೋ ಆ ದಾರಿ ಹಿಡಿಯಬೇಕು ಎಂಬುದಕ್ಕೆ ಮಹತ್ವ ಕೊಡಬೇಕು. ಏಳಿಗೆಯೆಡೆಗೆ ಪ್ರಮುಖಹೆಜ್ಜೆ ಅಧಿಕಾರದ ಸೂಕ್ತ ವಿಕೇಂದ್ರಿಕರಣವೇ ಆಗಿದೆ. ಅದು ಬಿಟ್ಟು ಒಡಕಿನ ದಾರಿ ಹಿಡಿದರೆ ಕೇಂದ್ರಸರ್ಕಾರದ ಮುಂದೆ ಎರಡೂ ಭಾಗದ ಮಂದಿ ಕೈಒಡ್ಡಿ ನಿಲ್ಲಬೇಕಾಗುತ್ತದೆ. ಹುಸಿ ರಾಷ್ಟ್ರೀಯವಾದಿಗಳಿಗೆ ಬೇಕಿರುವುದೂ ಇದೇ ತಾನೇ? ಬಲಿಷ್ಠವಾದ ಕೇಂದ್ರ ಮತ್ತು ಬಲಹೀನ ರಾಜ್ಯಗಳ ಸೃಷ್ಟಿಯನ್ನೇ ಸಿದ್ಧಾಂತವಾಗಿಸಿಕೊಂಡ ಸಂಘಟನೆಗಳ ಗರಡಿಯಲ್ಲಿ ಬೆಳೆದ ಮಂದಿಯ ಗುರಿಯೂ ಇದೇ ತಾನೇ? ಕನ್ನಡಿಗರು ಒಟ್ಟಾರೆ ಕರ್ನಾಟಕದ ಎಲ್ಲಾ ಭಾಗಗಳ ಏಳಿಗೆಯನ್ನು ಪ್ರತಿಪಾದಿಸುವವರ ಕೈಹಿಡಿಯಬೇಕೋ, ಆಯ್ದ ಕೆಲಭಾಗಗಳ ಬಗ್ಗೆ ಮಾತ್ರಾ ಮಾತಾಡುವವರನ್ನು ಬೆಂಬಲಿಸಬೇಕೋ, ಕಟ್ಟುವವರ ಕೈಹಿಡಿಯಬೇಕೋ, ಒಡೆಯುವವರ ಕೈಜೋಡಿಸಬೇಕೋ ತೀರ್ಮಾನಿಸಬೇಕಾಗಿದೆ.

 - ಆನಂದ್

Tuesday, June 9, 2015

ಕರ್ನಾಟಕಕ್ಕೊಂದು ಪ್ರಾದೇಶಿಕ ಪಕ್ಷ ಕಟ್ಟಲು ಇದು ಸಕಾಲ


ಕನ್ನಡದ ಎರಡು ಸಾವಿರ ವರುಶಗಳ ಇತಿಹಾಸದ ಮೇಲೊಮ್ಮೆ ಕಣ್ಣು ಹಾಯಿಸಿದರೆ ಮುಕ್ಕಾಲು ಪಾಲು ಅವಧಿಯಲ್ಲಿ ಕನ್ನಡ ನಾಡನ್ನಾಳಿದ ರಾಜಮನೆತನಗಳು ಇಡೀ ಭಾರತದಲ್ಲಿ ಬೀರಿದ ಪ್ರಭಾವ, ಮಾಡಿದ ಸಾಧನೆಗಳು ನಮ್ಮ ಗಮನ ಸೆಳೆದರೆ ತದನಂತರದ ಕಾಲು ಪಾಲು ಅವಧಿಯಲ್ಲಿ ಪರಕೀಯರ ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿದ್ದು, ನಮ್ಮ ಮೇಲಿನ ನಂಬಿಕೆಯನ್ನೇ ನಾವು ಕಳೆದುಕೊಂಡಿದ್ದು, ಕಷ್ಟ ಪಟ್ಟು ಏಕೀಕರಣ ಸಾಧಿಸಿದ್ದು, ಆನಂತರ ಸ್ವತಂತ್ರ ಭಾರತದ ಒಕ್ಕೂಟದಲ್ಲಿ ರಾಜಕೀಯವಾಗಿ ಯಾವುದೇ ಪ್ರಭಾವ ಬೀರದೇ ಇತರರಿಗೆ ಬರೀ ಚಪ್ಪಾಳೆ ಹೊಡೆಯುವ ಹಂತದಲ್ಲೇ ನಿಂತು ಹೋಗಿರುವ ದುರಂತ ಕಾಣಿಸುತ್ತೆ. ಸ್ವಾತಂತ್ರ್ಯ ಬಂದ ನಂತರದ ಅವಧಿಯಲ್ಲಿ ಕನ್ನಡಕ್ಕೆ ಶಿಕ್ಷಣ, ಆಡಳಿತ ಹೀಗೆ ಕೆಲವು ವಿಷಯಗಳಲ್ಲಿ ಒಂದಿಷ್ಟು ಬಲ ಬಂದರೂ ರಾಜಕೀಯವಾಗಿ ಕನ್ನಡಕ್ಕೆ ಒಂದು ಬಲ ತಂದುಕೊಳ್ಳದೇ ಕನ್ನಡವೆಂದರೆ ಸಾಹಿತ್ಯ, ಸಂಗೀತ, ಸಿನೆಮಾದಂತಹ ಜುಟ್ಟಿನ ಮಲ್ಲಿಗೆಗೆ ನಮ್ಮ ಆಲೋಚನೆಯನ್ನು ಸೀಮಿತಗೊಳಿಸಿಕೊಂಡಿದ್ದು ನಮ್ಮೆಲ್ಲ ಸಮಸ್ಯೆಗಳ ಮೂಲದಲ್ಲಿದೆ. ಜಾಗತೀಕರಣ, ತಂತ್ರಜ್ಞಾನದಲ್ಲಾಗಿರುವ ಕ್ಷಿಪ್ರ ಬದಲಾವಣೆ, ಇದರ ಬೆನ್ನಲ್ಲೇ ಆಗಿರುವ ಅನಿಯಂತ್ರಿತ ಪರನುಡಿಯವರ ವಲಸೆ ನಮ್ಮ ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸಿವೆ.

ಕನ್ನಡ ಕೇಂದ್ರಿತವಾದ ರಾಜಕಾರಣ ಮಾಡುವ ಒಂದೇ ಒಂದು ರಾಜಕೀಯ ಪಕ್ಷವನ್ನ ನಾವು ಕಟ್ಟಿಕೊಳ್ಳದಿರುವುದರ ಪರಿಣಾಮ ವಿಧಾನಸೌಧದಲ್ಲಿ ಆಗುವ ಚರ್ಚೆಗಳಲ್ಲಿ ಕಾಣಬಹುದು. ಕನ್ನಡ, ಕನ್ನಡಿಗರ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳ ವಿಷಯಗಳು ಚರ್ಚೆಗೆ ಬರುವುದಾಗಲಿ, ಬಂದರೂ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರತ್ತ ಕೆಲಸ ಮಾಡುವ ನಿಷ್ಟೆ, ಕಾಳಜಿಯನ್ನಾಗಲಿ ನೋಡಲು ನಮಗೆ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ನದಿ ನೀರಿನ ಹಂಚಿಕೆಯಿರಬಹುದು, ರಸ್ತೆ,ರೈಲುಗಳ ಸೌಕರ್ಯದ ವಿಷಯವಿರಬಹುದು, ಕೇಂದ್ರದಿಂದ ನ್ಯಾಯವಾಗಿ ದಕ್ಕಬೇಕಾದ ಯೋಜನೆ, ಅನುದಾನಗಳಿರಬಹುದು, ಗಡಿಯ ವಿಚಾರವಿರಬಹುದು, ಕರ್ನಾಟಕದಲ್ಲಿ ಕನ್ನಡ, ಕನ್ನಡಿಗನ ಸಾರ್ವಭೌಮತ್ವದ ವಿಚಾರವಿರಬಹುದು, ಹೀಗೆ ಪ್ರತಿಯೊಂದರಲ್ಲೂ ನಾವು ಹೀನಾಯವಾದ ಸ್ಥಿತಿ ತಲುಪಿದ್ದೇವೆ.

ನಮ್ಮ ನಾಡಿನ ರಾಜಕಾರಣವನ್ನು ಕನ್ನಡ ಬಿಟ್ಟು ಇನ್ನೆಲ್ಲ ತರದ ವಾದಗಳು, ಸಿದ್ಧಾಂತಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಹೊತ್ತಿನಲ್ಲಿ ಕಳೆದ ಹದಿನೈದು ವರ್ಷಗಳಲ್ಲಿ ಒಂದು ಸಣ್ಣ ಸಮಾಧಾನವೆಂಬಂತೆ ತಲೆ ಎತ್ತಿದ್ದು ಕರ್ನಾಟಕ ರಕ್ಷಣಾ ವೇದಿಕೆ ಅನ್ನುವ ಸಂಘಟನೆ. ಹದಿನೈದು ವರ್ಷಗಳಲ್ಲಿ ಕಾವೇರಿ, ಕೃಷ್ಣಾ ನದಿಯ ವಿಚಾರವಿರಬಹುದು, ಕಳಸಾಬಂಡೂರಿಯಂತಹ ಕುಡಿಯುವ ನೀರಿನ ವಿಚಾರವಿರಬಹುದು, ರೈಲ್ವೇ ಮತ್ತು ಬ್ಯಾಂಕ್ ನೇಮಕಾತಿಯಂತಹ ವಿಷಯವಿರಬಹುದು, ಕರ್ನಾಟಕದಲ್ಲಿ ಹುಟ್ಟುವ ಉದ್ಯೋಗಗಳಲ್ಲಿ ಬಹುಪಾಲು ಕನ್ನಡಿಗರಿಗೇ ಸಿಗಬೇಕು ಅನ್ನುವತ್ತ ಕೈಗೊಳ್ಳಲಾಗಿರುವ ಹೋರಾಟಗಳಿರಬಹುದು, ಬೆಳಗಾವಿಯ ಗಡಿಯ ವಿಚಾರದಲ್ಲಿ ಪುಂಡ ಎಮ್.ಈ.ಎಸ್ ಸಂಘಟನೆಯನ್ನ ಹದ ಮಾಡಿದ ಸಂಗತಿಯಿರಬಹುದು, ಕರವೇ ಒಂದು ನಿಜವಾದ ಕನ್ನಡ ಪರ ರಾಜಕೀಯ ಪಕ್ಷದ ಹೊಣೆಗಾರಿಕೆಯನ್ನು ಬೀದಿ ಬದಿಯ ಹೋರಾಟದ ಮೂಲಕವೇ ರೂಪಿಸಿ ತೋರಿಸಿದೆ.

ಇನ್ನಾವುದೇ ರಾಜ್ಯದಲ್ಲಿ ಇಂತಹದೊಂದು ಹೋರಾಟ ಸಂಘಟನೆ ಇದ್ದಿದ್ದರೆ ಈ ಹೊತ್ತಿಗೆ ಹತ್ತರಿಂದ ಇಪ್ಪತ್ತು ಶಾಸಕರು ಆ ಸಂಘಟನೆಯಿಂದ ವಿಧಾನಸಭೆಯ ಮೆಟ್ಟಿಲೇರುತ್ತಿದ್ದರು. ಆದರೆ ತನ್ನ ಮೂಲ ಗುರುತು ಕನ್ನಡವೆಂಬುದನ್ನೇ ಮರೆತು ಜಾತಿ, ಧರ್ಮದ ಸಂಕೋಲೆಯಲ್ಲಿ ಬಂಧಿಯಾಗಿರುವ ಕನ್ನಡಿಗರ ನಾಡಿನಲ್ಲಿ ಇಂತಹದೊಂದು ಬದಲಾವಣೆಗೆ ಇನ್ನಷ್ಟು ಸಮಯ ಕಾಯಬೇಕಾದೀತು. ಈವರೆಗಿನ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನವೆಲ್ಲವೂ ಕರ್ನಾಟಕದಲ್ಲಿ ವಿಫಲವಾಗಿದ್ದರೆ ಅದಕ್ಕೆ ಕಾರಣ ಈ ಪಕ್ಷಗಳು ಕನ್ನಡ ಕೇಂದ್ರಿತವಾದ ಒಂದು ಸಿದ್ಧಾಂತವನ್ನಾಗಲಿ, ಬುಡಮಟ್ಟದ ಸಂಘಟನೆಯನ್ನಾಗಲಿ ಹೊಂದಿಲ್ಲದೇ ಇದ್ದಿದ್ದು. “ರಾಷ್ಟ್ರೀಯ ಪಕ್ಷದಲ್ಲಿ ಸ್ಥಾನಮಾನ ಸಿಗಲಿಲ್ಲ, ಅನ್ಯಾಯವಾಯಿತು” ಮುಂತಾದ ವೈಯಕ್ತಕ ನೆಲೆಯ ಕಾರಣವನ್ನು ಮುಂದೊಡ್ಡಿ ಪಕ್ಷ ಕಟ್ಟಿದ ಹೆಚ್ಚಿನ ನಾಯಕರಿಗೆ ಸಹಜವಾಗಿಯೇ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಆದರೆ ಬುಡಮಟ್ಟದಲ್ಲಿ ಸಂಘಟನೆ ಮತ್ತು ನಿರಂತರವಾಗಿ ಕನ್ನಡ ಪರ ಹೋರಾಟದ ಒಂದು ಇತಿಹಾಸವನ್ನೇ ಹೊಂದಿರುವ ಕರವೇ ರಾಜಕೀಯಕ್ಕೆ ಇಳಿದರೆ ಹತ್ತು ಹದಿನೈದು ವರ್ಷದಲ್ಲಾದರೂ ಕನ್ನಡಕ್ಕೆ ರಾಜಕೀಯದ ಬಲ ದಕ್ಕಬಹುದು ಅನ್ನುವ ನಿರೀಕ್ಷೆ ಸಾಕಷ್ಟು ಕನ್ನಡಿಗರಲ್ಲಿದೆ. ಅಂತಹದೊಂದು ಶಕ್ತಿ ಮತ್ತು ಸಾಧ್ಯತೆ ಸಂಘಟನಾ ಚತುರರಾದ ಕರವೇ ಅಧ್ಯಕ್ಷರಾದ ಟಿ.ಎ.ನಾರಾಯಣ ಗೌಡರಲ್ಲಿದೆ. ಎಡ-ಬಲದ ತಿಕ್ಕಾಟಗಳಿಂದ ಆಚೆ ನಿಂತು, ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಪರವಾದ ಸಿದ್ಧಾಂತದ ಸುತ್ತ ಒಂದು ಪ್ರಬಲ ಪ್ರಾದೇಶಿಕ ಪಕ್ಷ ಕಟ್ಟುವ ಆ ಪ್ರಯತ್ನಕ್ಕಾಗಿ ಎದುರು ನೋಡೊಣ.

--ವಸಂತ್ ಶೆಟ್ಟಿ

Tuesday, May 19, 2015

ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟದ ಬೆದರಿಕೆ: ಏಳಿಗೆಯ ಕಾಳಜಿಯಲ್ಲಾ.. ಸ್ವಾರ್ಥದ ಹೊಲಸು ರಾಜಕೀಯ

(ಚಿತ್ರಕೃಪೆ: ಉದಯವಾಣಿ ದಿನಪತ್ರಿಕೆ)

"ಉತ್ತರ ಕರ್ನಾಟಕದ ಏಳಿಗೆ ಮತ್ತು ಪ್ರತ್ಯೇಕ ರಾಜ್ಯದ ಹೋರಾಟದ ಭಾಗವಾಗಿ ನಾವು ಇಂತಿಂತಹ ಯೋಜನೆಗಳನ್ನು ಮಾಡಿಕೊಂಡಿದ್ದೇವೆ. ೨೦೧೮ರ ಚುನಾವಣೆಯ ಹೊತ್ತಿಗೆ ಈ ಉರಿಯನ್ನು ದೊಡ್ಡದಾಗಿಸಿ ಪ್ರತ್ಯೇಕ ರಾಜ್ಯ ಮಾಡುವುದು ನಮ್ಮ ಗುರಿ" ಎಂಬರ್ಥದಲ್ಲಿ ವಿಜಾಪುರದ ಶಾಸಕರಾದ ಶ್ರೀ ಎ. ಎಸ್. ಪಾಟೀಲ ನಡಹಳ್ಳಿಯವರು ಹೇಳಿಕೆ ನೀಡಿದ್ದಾರೆ. ಕರ್ನಾಟಕ ಒಡೆಯುವುದನ್ನೇ ತಮ್ಮ ಪರಮಗುರಿಯಾಗಿ ಮಾಡಿಕೊಂಡಿರುವಂತೆ ನಡೆದುಕೊಳ್ಳುತ್ತಿರುವ ತಂಡದ ಹೊಸನಾಯಕರಾಗಿ ಶ್ರೀಯುತರು ದನಿ ಎತ್ತಿದ್ದಾರೆ. ಇದುವರೆವಿಗೆ ಬೆಳಗಾವಿ ಜಿಲ್ಲೆಯವರಾದ ಶ್ರೀ ಉಮೇಶ್ ಕತ್ತಿಯವರಿಂದ ಈ ಕೂಗನ್ನು ಎಬ್ಬಿಸಲಾಗುತ್ತಿತ್ತು. ಅದಕ್ಕೆ ಅಷ್ಟಾಗಿ ಬೆಂಬಲ ಸಿಗದ ಕಾರಣದಿಂದ ವಿಜಯಪುರ ಜಿಲ್ಲೆಯ ರಾಜಕಾರಣಿಯ ಕಡೆಯಿಂದ ಈ ಕೂಗನ್ನು ಎಬ್ಬಿಸಲಾಗುತ್ತಿದೆ. ಇವರ ನಿಜವಾದ ಬೇಡಿಕೆ ಏನು? ಇವರ ಸಮಸ್ಯೆ ಏನು? ಇವರು ಕೊಡುತ್ತಿರುವ ಪರಿಹಾರವೇನು?

ಒಡೆದು ಬೇರೆಯಾಗುವ ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳೆಂದು ಇವರು ಗುರುತಿಸಿರುವುದು ಬೆಳಗಾವಿ, ಕಲ್ಬುರ್ಗಿ, ಬಳ್ಳಾರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಧಾರವಾಡ, ಬೀದರ್, ಉತ್ತರ ಕನ್ನಡ, ಕೊಪ್ಪಳ, ಹಾವೇರಿ, ಯಾದಗಿರಿ ಮತ್ತು ಗದಗ ಜಿಲ್ಲೆಗಳನ್ನು. ವಾಸ್ತವವಾಗಿ ತಮ್ಮ ನಡುವೆ ಭೌಗೋಳಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಇಂದಿನ ಉತ್ತರ ಮತ್ತು ದಕ್ಷಿಣ ಕರ್ನಾಟಕಗಳಂತೆಯೇ ವೈವಿಧ್ಯತೆಯನ್ನು ಹೊಂದಿರುವ ಈ ಜಿಲ್ಲೆಗಳನ್ನೆಲ್ಲಾ ಕೂಡಿಸಿಕೊಂಡು ಪ್ರತ್ಯೇಕ ರಾಜ್ಯ ಮಾಡಬೇಕೆನ್ನುವ ಕನಸಿನ ಇವರು, ಇದಕ್ಕಾಗಿ ನೀಡುತ್ತಿರುವ ಪ್ರಮುಖ ಕಾರಣವೇನೆಂದರೆ ’ಉತ್ತರ ಕರ್ನಾಟಕದಲ್ಲಿ ಅನೇಕ ಹಿಂದುಳಿದ ಪ್ರದೇಶಗಳಿವೆ, ಇಲ್ಲಿ ಕೈಗಾರಿಕೆಗಳು ಬೆಳೆದಿಲ್ಲಾ, ನೀರಾವರಿ ಸರಿಯಾಗಿಲ್ಲಾ, ಶಿಕ್ಷಣ ಸವಲತ್ತು ಸರಿಯಾಗಿಲ್ಲಾ... ಒಟ್ಟಾರೆ ಏಳಿಗೆಯಾಗಿಲ್ಲಾ’ ಎನ್ನುವುದು. ಇದರಲ್ಲಿ ಕೆಲಮಟ್ಟಿಗೆ ದಿಟವೂ ಇದೆ. ಉತ್ತರ ಕರ್ನಾಟಕದ ಹಲವಾರು ತಾಲ್ಲೂಕುಗಳು ಹಿಂದಿರುವುದನ್ನು ಡಾ. ನಂಜುಂಡಪ್ಪ ವರದಿಯೂ ಸೇರಿದಂತೆ ಅನೇಕ ವರದಿಗಳಲ್ಲಿ ಹೇಳಲಾಗಿದೆ. ಈ ಹಿಂದುಳಿದಿರುವ ತಾಲ್ಲೂಕುಗಳ ಏಳಿಗೆಗೆ ವಿಶೇಷ ಅನುದಾನಗಳನ್ನು, ಸಂವಿಧಾನದ ೩೭೧ನೇ ವಿಧಿಯನ್ನು ದೊರಕಿಸಿಕೊಟ್ಟಿರುವುದೂ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು ಯೋಜನೆಗಳು ನಿರೀಕ್ಷಿತ ವೇಗದಲ್ಲಿ ಜಾರಿಯಾಗಿಲ್ಲ ಎಂಬ ದೂರಿದೆ. ಆದರೆ ಈ ಸಮಸ್ಯೆಗೆ ಪರಿಹಾರವಾದರೂ ಏನು ಎಂಬುದು ಎಲ್ಲರೂ ಕೂಡಿ ಯೋಚಿಸಬೇಕಾದ ಸಂಗತಿಯಾಗಿದೆ.

ಉತ್ತರ ಕರ್ನಾಟಕದ ಏಳಿಗೆಗಾಗಿ ಬೇಡಿಕೆ ಇಡುತ್ತಿರುವ ಉಮೇಶ್ ಕತ್ತಿ, ಪ್ರಭಾಕರ್ ಕೋರೆ, ನಡಹಳ್ಳಿಯವರ ಬೇಡಿಕೆಗಳ ನಿಜಾಯಿತಿಯ ಬಗ್ಗೆ ಅನುಮಾನ ಹುಟ್ಟಲು ಅವರು ಇಡುತ್ತಿರುವ ಬೇಡಿಕೆಗಳೇ ಕಾರಣವಾಗುತ್ತಿವೆ. ಒಬ್ಬರು ಪ್ರತಿಷ್ಟಿತ ಐಐಟಿ ಬೆಳಗಾವಿಗೆ ಬರದಿದ್ದರೆ ಪ್ರತ್ಯೇಕ ರಾಜ್ಯ ಕೇಳುತ್ತೇವೆ ಎಂದಿದ್ದರೆ, ನಡಹಳ್ಳಿಯವರು ಇಟ್ಟಿರುವ ಬೇಡಿಕೆಯಾದರೂ ಹೇಗಿದೆ ನೋಡಿ. ಇಡೀ ರಾಜ್ಯದ ಬಜೆಟ್ಟಿನ ೭೦% ಹಣವನ್ನು ಪ್ರತಿವರ್ಷ ಈ ಹದಿಮೂರು ಜಿಲ್ಲೆಗಳ ಏಳಿಗೆಗಾಗಿ ನೀಡಬೇಕಂತೆ. ಇಡೀ ಕರ್ನಾಟಕದ ಒಟ್ಟು ಆದಾಯದ ೫೧% ಬರುವುದು ಬೆಂಗಳೂರಿನಿಂದ, ದಕ್ಷಿಣ ಕರ್ನಾಟಕದಿಂದ ಬರುವ ಒಟ್ಟೂ ಆದಾಯ ಸುಮಾರು ೭೧%. ಈ ಭಾಗದ ಜನಸಂಖ್ಯೆಯೂ ಸರಿಸುಮಾರು ಅಷ್ಟೇ ಇದೆ. ಅಂದರೆ ಕರ್ನಾಟಕದ ೬.೧೧ ಕೋಟಿ ಜನಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಜನಸಂಖ್ಯೆ ೪೨% ಇದೆ. ಅಂದರೆ ದಕ್ಷಿಣ ಕರ್ನಾಟಕದಿಂದ ಹುಟ್ಟುವ ಅಷ್ಟೂ ಆದಾಯದಲ್ಲಿ ಅರ್ಧದಷ್ಟನ್ನು ಉತ್ತರ ಕರ್ನಾಟಕಕ್ಕೆ ಮೀಸಲಿಡಿ ಎನ್ನುವುದು ನ್ಯಾಯವಾದ ಕಾರ್ಯಸಾಧುವಾದ ಬೇಡಿಕೆಯೇ? ಅದೂ ಮುಂದಿನ ಇಪ್ಪತ್ತು ವರ್ಷಗಳ ಕಾಲ ಹೀಗೆ ಮಾಡಬೇಕಂತೆ. ಇಲ್ಲದಿದ್ದರೆ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡುತ್ತಾರಂತೆ. ಅಂದರೆ ಎಂದಿಗೂ ಈಡೇರಿಸಲು ಸಾಧ್ಯವಾಗದ ಬೇಡಿಕೆಯನ್ನು ಮುಂದುಮಾಡಿ, ಇದು ಈಡೇರದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ ಮಾಡುತ್ತೇವೆ ಎನ್ನುವ ಮಾತಿನ ಹಿಂದಿರುವ ಹುನ್ನಾರ ಏನು ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಇಲ್ಲದಿದ್ದರೆ ಬೇರೆ ಬೇರೆ ಮೂವತ್ತು ಸಂಸ್ಥೆಗಳನ್ನು ಈಗಿರುವುದಕ್ಕೆ ಪ್ರತಿಸ್ಪರ್ಧಿಯಾಗುವಂತೆ ಕಟ್ಟುವ ಮಾತೇಕೆ ಆಡುತ್ತಿದ್ದರು? ಸದರಿ ಸಂಸ್ಥೆಗಳಿಗೂ ಏಳಿಗೆಯ ಬೇಡಿಕೆಗೂ ಏನು ಸಂಬಂಧ? ಈಗಾಗಲೇ ಇವರೇ ತಿಳಿಸಿರುವಂತೆ ಬೇರೆ ರಾಜ್ಯ ಮಾಡಲು ಇವೆಲ್ಲಾ ನೆಪ. ಇಂತಹ ಒಡಕಿಗೆ ಬೆಂಬಲ ಗಿಟ್ಟಿಸಲು "ನಮಗೆ ಅನ್ಯಾಯವಾಗುತ್ತಿದೆ" ಎಂದು ಹುಯಿಲೆಬ್ಬಿಸುವುದು ಅಸ್ತ್ರ. 
ವಾಸ್ತವದಲ್ಲಿ ಪ್ರತ್ಯೇಕ ರಾಜ್ಯವಾಗುವುದು ಉತ್ತರ ಕರ್ನಾಟಕದ ಭಾಗದ ಜನರಿಗೆ ಹೇಗೆ ಒಳಿತನ್ನು ಮಾಡುತ್ತದೆ ಎಂಬ ಬಗ್ಗೆ ಈ ನಾಯಕರುಗಳ ಬಳಿ ಯಾವ ಯೋಜನೆಯಿದೆ ಎಂಬುದು ಜಾಹೀರಾಗಿಲ್ಲ. ಹೇಗೆ ಸಂಪನ್ಮೂಲಗಳನ್ನು ತರಲಾಗುತ್ತದೆ, ಹೇಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುತ್ತದೆ, ಹೇಗೆ ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಿಸಲಾಗುತ್ತದೆ, ಹೇಗೆ ಇಲ್ಲಿಗೆ ಉದ್ದಿಮೆಗಳನ್ನು ತರಲಾಗುತ್ತದೆ, ಹೇಗೆ ನೀರಾವರಿ ಯೋಜನೆಗಳನ್ನು ಪೂರೈಸಲಾಗುತ್ತದೆ, ಹೇಗೆ ಉದ್ಯೋಗಾವಕಾಶ ಹುಟ್ಟುಹಾಕಲಾಗುತ್ತದೆ ಮತ್ತು ಎಲ್ಲಕ್ಕಿಂತಾ ಮಿಗಿಲಾಗಿ ಪ್ರತ್ಯೇಕ ರಾಜ್ಯವಾಗುವುದು ಹಿಂದುಳಿದಿರುವಿಕೆಗೆ ಹೇಗೆ ಪರಿಹಾರ ಎಂಬುದನ್ನು ಜನರು ಕೇಳಬೇಕಾಗಿದೆ.

ಕರ್ನಾಟಕದ ಜನರು ಮನೆ ಮನ ಒಡೆಯುವ ಇಂಥಾ ಮಾತುಗಳಿಗೆ ಮರುಳಾಗದೆ ನಿಜಾಂಶಗಳನ್ನು ತೂಗಿನೋಡಬೇಕಾಗಿದೆ. ಒಂದು ನಾಡಿನ ಜನರ ಏಳಿಗೆಗಿಂತಲೂ ಮಿಗಿಲಾದುದು ಇನ್ನೊಂದಿಲ್ಲ. ಜನರ ಶಿಕ್ಷಣ, ದುಡಿಮೆ - ಆ ಮೂಲಕ ಏಳಿಗೆ ಮತ್ತು ನೆಮ್ಮದಿಯ ಬದುಕಿನ ಪರಮೋದ್ದೇಶಕ್ಕಾಗೇ ನಾಡು, ವ್ಯವಸ್ಥೆ, ರಾಜ್ಯ, ದೇಶ, ಭಾಷೆಗಳನ್ನು ಮನುಷ್ಯ ಕಟ್ಟಿಕೊಂಡಿರುವುದು. ಭಾವನಾತ್ಮಕವಾದ ವಿಷಯವೊಂದಕ್ಕಾಗಿ ಏಳಿಗೆಯನ್ನು ತ್ಯಾಗ ಮಾಡಿ ಎನ್ನುವ ಮಾತನ್ನು ಯಾರೂ ಒಪ್ಪಬೇಕಾದ್ದಿಲ್ಲ. ಈಗ ಉತ್ತರ ಕರ್ನಾಟಕ ಹಿಂದುಳಿಯಲು ಕಾರಣಗಳೇನು, ಏಕೀಕರಣವಾದ ನಂತರ ಆಗಿರುವ ಬೆಳವಣಿಗೆಯ ಪ್ರಮಾಣವೇನು, ಇಷ್ಟು ವರ್ಷಗಳ ಕರ್ನಾಟಕದ ಆಳ್ವಿಕೆಯಲ್ಲಿ ಈ ಭಾಗದ ಅದೆಷ್ಟು ನಾಯಕರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ, ಎಷ್ಟು ಯೋಜನೆಗಳನ್ನು ಇಲ್ಲಿಗೆ ತಂದಿದ್ದಾರೆ, ಇಂದಿಗೂ ಹಿಂದುಳಿದಿರುವ ಪರಿಸ್ಥಿತಿಗೆ ಇಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅದೆಷ್ಟು ಕಾರಣ ಎಂಬುದನ್ನೆಲ್ಲಾ ಅರಿಯಬೇಕಾಗಿದೆ. 

ಜೊತೆಗೆ ಈ ಮಂದಿ ಪ್ರತಿಪಾದಿಸುತ್ತಿರುವ ಪ್ರತ್ಯೇಕ ರಾಜ್ಯವು ಹೇಗೆ ಏಳಿಗೆಯನ್ನು ತಂದುಕೊಡಲಿದೆ, ಈ ಭಾಗಕ್ಕೆ ಸಂಪನ್ಮೂಲದ ಕ್ರೋಡೀಕರಣ ಎಲ್ಲಿಂದ, ಹೇಗೆ ಹೊಂದಿಸಲಾಗುತ್ತದೆ ಎಂಬುದನ್ನು ಯೋಚಿಸಬೇಕಾಗಿದೆ. ಈಗ ಒಗ್ಗೂಡಿದ ಕರ್ನಾಟಕಕ್ಕೆ ಯೋಜನೆಗಳನ್ನು ತರಬೇಕಾದಾಗಲಾಗಲೀ, ನಮ್ಮ ನಾಡಿನ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲಾಗಲೀ.. ಇಡಿಯ ಕರ್ನಾಟಕದಿಂದ ದೆಹಲಿಗೆ ಹೋಗಿರುವ ಲೋಕಸಭೆಯ ೨೮ ಸದಸ್ಯರು + ರಾಜ್ಯಸಭೆಯ ೧೨ ಸಂಸದರು ತಿಣುಕುತ್ತಿರುವುದನ್ನು ನೋಡುತ್ತಿದ್ದೇವೆ. ಅಂಥದ್ದರಲ್ಲಿ ರಾಜ್ಯ ಹೋಳಾಗಿ ಸಂಸದರ ಸಂಖ್ಯೆ ೧೦-೧೨ಕ್ಕೆ ಇಳಿದರೆ ನಮ್ಮ ಯಾವ ಮಾತು ದೆಹಲಿಯಲ್ಲಿ ನಡೆದೀತು ಎಂಬುದನ್ನು ಯೋಚಿಸಬೇಕಾಗಿದೆ. ಇಷ್ಟೂ ವರ್ಷಗಳ ಕಾಲ ಉತ್ತರ ಕರ್ನಾಟಕವನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳು ಅಲ್ಲಿನ ಇಂದಿನ ಪರಿಸ್ಥಿತಿಯಲ್ಲಿ ಪಾಲುದಾರರಾಗಿದ್ದಾರೆ ಎನ್ನುವುದನ್ನು ಅರಿತರೆ ನಾಳೆ ಅವರಿಂದಲೇ ಆಳಿಸಿಕೊಳ್ಳುವ ಪುಟ್ಟ ಪ್ರತ್ಯೇಕ, ಕಡಿಮೆ ಸಂಪನ್ಮೂಲದ, ಕಡಿಮೆ ಸಂಸದರ ರಾಜ್ಯವೊಂದು ಏಳಿಗೆಯ ಕನಸು ಕಾಣಲಿಕ್ಕಾದರೂ ಆದೀತೆ ಎಂಬುದನ್ನು ಯೋಚಿಸಬೇಕಾಗಿದೆ. 

ಪ್ರತ್ಯೇಕ ರಾಜ್ಯದ ಒಡಕಿನ ದನಿ ಎತ್ತುವ ಮಂದಿ, "ನಾವೆಲ್ಲಾ ಒಂದೇ" ಎನ್ನುವ ಕನ್ನಡಿಗರ ನಡುವೆ "ಉತ್ತರದವರೇ ಬೇರೆ, ದಕ್ಷಿಣದವರೇ ಬೇರೆ" ಎನ್ನುವ ಭಿನ್ನತೆಯನ್ನು ಕೃತಕವಾಗಿ ಹುಟ್ಟುಹಾಕುವ ಮೂಲಕ ಪರಸ್ಪರ ಅಪನಂಬಿಕೆ, ದ್ವೇಷಾಸೂಯೆಗಳನ್ನು ಹುಟ್ಟುಹಾಕುತ್ತಿಲ್ಲವೇ? ಒಟ್ಟಾರೆಯಾಗಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿಯದೆ ತಮ್ಮ ಸ್ವಾರ್ಥಕ್ಕಾಗಿಯೋ ಮತ್ತೊಂದಕ್ಕಾಗಿಯೋ ಕರ್ನಾಟಕವನ್ನು ಒಡೆಯಬೇಕೆಂದು ಕನಸು ಕಾಣುತ್ತಿರುವ ಮಂದಿಯ ಹುಚ್ಚುತನಕ್ಕೆ ನಾಡಜನತೆ ಮರುಳಾಗದಿರುವುದು ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

 - ಆನಂದ್ 

Monday, May 11, 2015

ರಸ್ತೆ ಸುರಕ್ಷತೆ ಕಾಯ್ದೆ - ಒಳ್ಳೆಯ ಆಡಳಿತ ಎನ್ನುತ್ತಾ ರಾಜ್ಯಗಳ ಅಧಿಕಾರ ಮೊಟಕು!


ಭಾರತದ ಕೇಂದ್ರಸರ್ಕಾರವು ಜಾರಿಗೊಳಿಸಲು ಮುಂದಾಗಿರುವ "ಸಾರಿಗೆ ಮತ್ತು ರಸ್ತೆ ಸುರಕ್ಷತಾ ಕಾಯಿದೆ - ೨೦೧೪"ನ್ನು ಕುರಿತಂತೆ ಇತ್ತೀಚೆಗೆ ಸಾರಿಗೆ ಸಂಸ್ಥೆಗಳ ನೌಕರರು, ಆಟೋ ಸಂಘಗಳು ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಿ ಹೊಸ ಕಾಯಿದೆಯ ಜಾರಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ. ಇದುವರೆಗೂ ರಸ್ತೆ ಸಾರಿಗೆ ಇಲಾಕೆಯು ರಾಜ್ಯಸರ್ಕಾರದ ಕೈಯಲ್ಲಿಯೇ ಇದೆ, ವಾಹನ ಚಾಲನೆಯ ಪರವಾನಿಗೆ ಕೊಡುವುದು, ಹೊಸ ವಾಹನಗಳ ನೊಂದಣಿ, ಬಳಸಿದ ವಾಹನಗಳ ಮರುಮಾರಾಟ, ರಸ್ತೆ ನಿಯಮಗಳನ್ನು ಮುರಿದವರಿಗೆ ದಂಡ ವಿಧಿಸುವ ಹಕ್ಕು ಇವೆಲ್ಲವೂ ರಾಜ್ಯಸರ್ಕಾರಗಳಿಗಿದ್ದು ಒಂದು ವೇಳೆ ಹೊಸ ಕಾಯಿದೆ ಜಾರಿಗೊಂಡರೆ ಈ ಅಧಿಕಾರವು ರಾಜ್ಯಸರ್ಕಾರದ ಕೈ ತಪ್ಪುತ್ತದೆ. ಈ ಕಾಯ್ದೆಯು ರಾಜ್ಯಗಳ ಹಕ್ಕನ್ನು ಸ್ಪಷ್ಟವಾಗಿ ಕಿತ್ತುಕೊಳ್ಳುತ್ತಿರುವುದಾಗಿದ್ದು ಸಾರಿಗೆ ಇಲಾಖೆಯ ಉತ್ತಮ ಆಡಳಿತಕ್ಕೆ ಇದು ದಾರಿ ಎಂಬ ನೆಪವನ್ನು ಕೇಂದ್ರ ನೀಡುತ್ತಿದೆ. ವಾಸ್ತವವಾಗಿ ತನ್ನ ಹಿತ ಕಾಪಾಡಿಕೊಳ್ಳಲು ಒಳ್ಳೆಯ ಆಡಳಿತಕ್ಕಾಗಿ ಕೇಂದ್ರದ ವಶಕ್ಕೆ ಪಡೆಯುತ್ತೇವೆ ಎನ್ನುವ ಇದೇ ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣವಾಗಬೇಕು ಮತ್ತು ಒಕ್ಕೂಟ ವ್ಯವಸ್ಥೆ ಸರಿಯಾಗಬೇಕು ಎಂದು ಕಹಳೆ ಊದುತ್ತಾ ಇರುವುದು ವಿಡಂಬನಾತ್ಮಕವಾಗಿದೆ.

ಹೊಸ ಕಾಯಿದೆಯ ಮೂಲಕ ಕೇಂದ್ರಸರ್ಕಾರವು ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವ ಮತ್ತು ರಾಜ್ಯಸರ್ಕಾರದ ಮೇಲೆ ತನ್ನ ಮೇಲುಗೈ ಸಾಧಿಸುವ ಒಕ್ಕೂಟ ವಿರೋಧಿ ಹೆಜ್ಜೆಯಿಟ್ಟಿದೆ ಎನ್ನಬಹುದು. ಸಾರಿಗೆ ನಿಯಮಗಳಂತಹ ಸರಳ ವಿಷಯವನ್ನೂ ಅತಿ ಕೇಂದ್ರೀಕೃತ ವ್ಯವಸ್ಥೆಯನ್ನಾಗಿಸುವುದು ಕರ್ನಾಟಕದಂತಹ ರಾಜ್ಯಕ್ಕೆ ದೊಡ್ಡಮಟ್ಟದ ಹೊಡೆತವೇ ಸರಿ. ಕಾಲಕಾಲಕ್ಕೂ ರಾಜ್ಯಗಳ ಹಕ್ಕುಗಳನ್ನು, ಇಲಾಕೆಗಳನ್ನೂ ಕೇಂದ್ರಸರ್ಕಾರವು ಕಿತ್ತುಕೊಳ್ಳುತ್ತಲೇ ಬಂದಿದೆಯೇ ಹೊರತು ರಾಜ್ಯಗಳ ಕೈ ಬಲಗೊಳಿಸುವ ಕೆಲಸವನ್ನು ಎಂದೂ ಮಾಡಿಲ್ಲ. ಮೈಸೂರು ಅರಸರ ಕಾಲದಲ್ಲಿ ಅತ್ಯಂತ ಮುಂದುವರೆದಿದ್ದ ಮೈಸೂರು ರೈಲ್ವೇಯಲ್ಲಿ ಕನ್ನಡಿಗರಿಗೆ (ಅದು ಕೇಂದ್ರದ ಸುಪರ್ದಿಗೆ ಹೋದ ನಂತರ) ನಿರಂತರ ಅನ್ಯಾಯಗಳಾಗುತ್ತಲೇ ಬಂದಿದೆ. ಈ ಅನ್ಯಾಯದ ಪರಿ ಯಾವ ಮಟ್ಟದಲ್ಲಿದೆಯೆಂದರೆ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ನೆಲಮಂಗಲಕ್ಕೆ ಒಂದು ರೈಲು ಓಡಿಸಬೇಕೆಂದರೆ ಕೇಂದ್ರಸರ್ಕಾರದ ಮುಂದೆ ಕೈಯೊಡ್ಡಿ ನಿಲ್ಲಬೇಕಾದ ಹಂತ ತಲುಪಿದ್ದೇವೆ. ಇನ್ನು ಕೆಲಸದ ವಿಷಯದಲ್ಲಂತೂ ಕನ್ನಡಿಗರನ್ನು ಹೊಸಕಿ ಹಾಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಕನ್ನಡಿಗರಾದ ಮೈಸೂರು ಅರಸರ ಕಾಲದಲ್ಲಿ ವಿಜೃಂಭಿಸುತ್ತಿದ್ದ ಹಲವಾರು ಕಾರ್ಖಾನೆಗಳನ್ನು, ಸಂಶೋಧನಾ ಕೇಂದ್ರಗಳನ್ನು ಕೇಂದ್ರಸರ್ಕಾರವು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಸಂಪೂರ್ಣ ಹಿಂದೀಮಯವಾಗಿವೆ, ಇವುಗಳಲ್ಲಿ ಕೆಲಸಕ್ಕೆ ಸೇರಲು ಹಿಂದೀ ಗೊತ್ತಿರಲೇಬೇಕೆಂದು ನಿಯಮ ಮಾಡಿಡಲಾಗಿದೆ. ಇನ್ನು ಬ್ಯಾಂಕುಗಳು ರಾಷ್ಟ್ರೀಕರಣಕೊಂಡ ನಂತರ ಕನ್ನಡ ನೆಲದಲ್ಲಿಯೇ ಜನ್ಮತಾಳಿದ ಬ್ಯಾಂಕುಗಳು ನಾಮುಂದು ತಾಮುಂದು ಎಂದು ಕನ್ನಡಿಗರ ಮೇಲೆಯೇ ಹಿಂದೀಹೇರಿಕೆ ಮಾಡಲು ಪೈಪೋಟಿ ನಡೆಸುತ್ತಿವೆ.

ಪರಿಸ್ಥಿತಿ ಹೀಗಿರುವಾಗ ರಸ್ತೆ ಇಲಾಕೆಯನ್ನೂ ಕೇಂದ್ರ ತನ್ನ ತೆಕ್ಕೆಗೆ ತೆಗೆದುಕೊಂಡು ಬಿಟ್ಟರೆ ಬೆಂಗಳೂರಿನಲ್ಲಿ ವಾಹನ ಚಾಲನೆ ಪರವಾನಿಗೆ ಪಡೆಯಬೇಕೆಂದರೆ ನಿಮಗೆ ಹಿಂದೀ ಗೊತ್ತಿರಲೇಬೇಕು ಎಂದು ನಿಯಮ ಮಾಡಿದರೂ ಅಚ್ಚರಿಯಿಲ್ಲ. ಇದುವರೆಗೂ ಕನ್ನಡಿಗರಿಗೆ ಮಾತ್ರವಿದ್ದ ಸಾರಿಗೆ ಇಲಾಖೆಯ ಕೆಲಸಗಳಿಗೆ ಬಿಹಾರಿಗಳೋ, ಉತ್ತರ ಪ್ರದೇಶದವರೋ ಬಂದು ತಮ್ಮ ಅಧಿಪತ್ಯ ಸ್ಥಾಪಿಸಿಬಿಟ್ಟರೆ ಕನ್ನಡಿಗರು ಮಿಸುಕಾಡುವಂತಿಲ್ಲ. ಇನ್ನು ಸಾರಿಗೆ ಇಲಾಕೆಯ ನಿಯಮಗಳನ್ನು ರೂಪಿಸುವುದು ಮತ್ತಿತರ ವಿಷಯಗಳ ಮೇಲೆ ತಮಗಿರುವ ಅಧಿಕಾರವನ್ನು ಕಳೆದುಕೊಳ್ಳುವ ರಾಜ್ಯಸರ್ಕಾರಗಳು ಮತ್ತಷ್ಟ್ಟು ಬಲಹೀನವಾಗಲಿವೆ. ನಮ್ಮ ಚಾಲನಾ ಪರವಾನಗಿ, ನಮ್ಮ ಪರವಾನಿಗೆಯ ಪರೀಕ್ಷೆಗಳು, ತುಂಬಬೇಕಾದ ಅರ್ಜಿಗಳು ಎಲ್ಲೆಡೆ ಇಂಗ್ಲೀಷ್ ಹಿಂದೀ ರಾರಾಜಿಸುವ ದಿನಗಳು ದೂರವಿಲ್ಲಾ. ಈ ಹಿನ್ನಲೆಯಲ್ಲಿ  ಒಕ್ಕೂಟ ವಿರೋಧಿಯಾದ ಈ ಹೊಸ ಕಾಯಿದೆಯನ್ನು ವಿರೋಧಿಸಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತಕಾಯುವ ಕೆಲಸವಾಗಬೇಕಿದೆ.

 - ಗಿರೀಶ್ ಕಾರ್ಗದ್ದೆ

Monday, April 27, 2015

ಪ್ರತ್ಯೇಕತೆಯ ದನಿ: ಅಭಿವೃದ್ಧಿಯ ಕೂಗಿನ ಸ್ವಾರ್ಥದ ಬಡಬಡಿಕೆ!

 (ಚಿತ್ರಕೃಪೆ: ಅಂತರ್ಜಾಲ)
ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಆಗುಹೋಗುಗಳನ್ನು ಗಮನಿಸುತ್ತಿದ್ದರೆ ಕರ್ನಾಟಕವನ್ನು ಒಡೆಯುವ ಬಗ್ಗೆ ಪದೇಪದೇ ಮಾತುಗಳು ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುವುದನ್ನು ನೋಡಬಹುದು. ಬಹುಷಃ ಈ ನಾಡೊಡೆಯುವ ಹೇಳಿಕೆಗಳನ್ನು ಕೊಡಲು ಮೊದಲಿಗೆ ಶುರುಮಾಡಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಶಾಸಕರಾಗಿರುವ ಶ್ರೀ ಉಮೇಶ ಕತ್ತಿಯವರು. ಇದಾದ ನಂತರ ಬೆಳಗಾವಿಯ ಸಂಸದರಾದ ಸುರೇಶ್ ಅಂಗಡಿಯವರು ಕತ್ತಿಯವರ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದರು. ಈಗ ಈ ಪಟ್ಟಿಗೆ ಮೊತ್ತೊಬ್ಬ ಬಿಜೆಪಿ ನಾಯಕ ಪ್ರಭಾಕರ ಕೋರೆಯವರು ಬೆಳಗಾವಿಗೆ ಐಐಟಿ ಬರದಿದ್ದರೆ ಪ್ರತ್ಯೇಕತೆಯ ಹೋರಾಟದ ಎಚ್ಚರಿಕೆಯನ್ನು ನೀಡಿರುವುದು ಮಾಧ್ಯಮದಲ್ಲಿ ವರದಿಯಾಗಿದೆ. ಇದರ ಜೊತೆಗೆ ಕಾಂಗ್ರೆಸ್ಸಿನ ಶಾಸಕರಾಗಿರುವ ಎ.ಎಸ್.ಪಾಟೀಲ್ ನಡಹಳ್ಳಿಯವರು ಪ್ರತ್ಯೇಕತೆಯ ಕೂಗಿಗೆ ಧ್ವನಿಗೂಡಿಸುತ್ತಿರುವುದನ್ನು ನೋಡಿದ್ದೇವೆ.

ಹಿರಿಯರ ಹೋರಾಟಕ್ಕೆ ರಾಜಕಾರಣದ ಹುಳಿ
ಕರ್ನಾಟಕದ ಏಕೀಕರಣದ ಪೂರ್ವದಲ್ಲಿ ಸುಮಾರು 22 ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು ನಮ್ಮ ನಾಡಿನ ಹಲವಾರು ಹಿರಿಯ ಚೇತನಗಳ ಹೋರಾಟದ ಫಲವಾಗಿ ಒಗ್ಗೂಡಿ ಇಂದಿನ ಕರ್ನಾಟಕ ರೂಪ ಪಡೆದುಕೊಂಡಿತು. ಇದಾಗಿ 58 ವರ್ಷಗಳು ಉರುಳಿವೆ. ಒಂದಾಗಿ ನಾಡಿನ ಸಮಗ್ರ ಅಭಿವೃದ್ಧಿಯ ಕನಸನ್ನು ಕಂಡಿದ್ದ ಹಿರಿಯರ ಕನಸು ಇಂದಿಗೂ ನನಸಾಗದಿರುವ ಬಗ್ಗೆ ನಾವೆಲ್ಲ ಯೋಚಿಸಬೇಕಾಗಿದೆ. ಐತಿಹಾಸಿಕವಾಗಿ ಹಾಗೂ ಸಾಮಾಜಿಕವಾಗಿ ನಾಡಿನ ವಿವಿಧ ಭಾಗಗಳ ಏಳಿಗೆ ಒಂದೇ ರೀತಿಯಲ್ಲಾಗಿಲ್ಲಾ ಎನ್ನುವುದು ದಿಟವೇ, ಇದಕ್ಕೆ ಅದರದೇ ಆದ ಕಾರಣಗಳಿವೆ. ಈ ಪ್ರಾದೇಶಿಕ ಅಸಮತೋಲನವನ್ನು ಕಡಿಮೆಯಾಗಿಸುವ ಹಲವಾರು ಪ್ರಯತ್ನಗಳನ್ನು ಸರಕಾರಗಳು ಮಾಡುತ್ತ ಬಂದಿವೆ (ಹೆಚ್ಚಿನ ಮಾಹಿತಿಗಾಗಿ ಡಾ. ಡಿ. ಎಂ. ನಂಜುಂಡಪ್ಪ ವರದಿಯನ್ನು ಓದಿ). ಆದರೆ ಇದನ್ನೇ ರಾಜಕೀಯದ ದಾಳವನ್ನಾಗಿಸಿಕೊಂಡಿರುವ ಕೆಲವು ರಾಜಕಾರಣಿಗಳು ಇಲ್ಲದ ಕಥೆ ಕಟ್ಟಿ ಜನರ ನಡುವೆ ಒಡಕನ್ನು ಉಂಟು ಮಾಡುತ್ತಿರುವ ಉದಾಹರಣೆಗಳನ್ನು ನಾವೀಗ ಪದೇ ಪದೇ ಕಾಣುತ್ತಿದ್ದೇವೆ. ಉತ್ತರ ಕರ್ನಾಟಕ ಬೇರೆರಾಜ್ಯವಾದರೆ ತಾನಲ್ಲದಿದ್ದರೂ ತನ್ನ ಮಗನಾದರೂ ಮುಖ್ಯಮಂತ್ರಿಯಾಗಲಿ ಎಂದು ಹೇಳುವ ಉಮೇಶ್ ಕತ್ತಿ ಒಂದೆಡೆಯಾದರೆ. ಬೆಳಗಾವಿಗೆ ಐಐಟಿ ಬರದಿದ್ದರೆ ಪ್ರತ್ಯೇಕ ರಾಜ್ಯದ ಹೋರಾಟದ ಬೆದರಿಕೆಯನ್ನು ಪ್ರಭಾಕರ ಕೋರೆ ಹಾಕುತ್ತಾರೆ. ಆದರ ಕೋರೆಯವರು ಐಐಟಿಗೆ ಸೂಚಿಸಲಾಗಿರುವ ಜಾಗಗಳಲ್ಲಿ ರಾಯಚೂರು ಹಾಗೂ ಧಾರವಾಡಗಳು ಸೇರಿವೆ ಎಂಬುದರ ಬಗ್ಗೆ ಗಮನಹರಿಸುತ್ತಿಲ್ಲವೇಕೆ? ಈ ಭಾಗಗಳು ಉತ್ತರ ಕರ್ನಾಟಕದಲ್ಲಿಲ್ಲವೇ? ಈ ಭಾಗಗಳ ಏಳಿಗೆ ಉತ್ತರ ಕರ್ನಾಟಕದ ಏಳಿಗೆಯಲ್ಲವೇ? ಸಮಗ್ರ ಕರ್ನಾಟಕದ ಏಳಿಗೆಯ ಬಗ್ಗೆ ದಾರಿ ತೋರಿಸಬೇಕಾಗಿದ್ದ ನಮ್ಮ ಜನನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ನಾಡನ್ನೇ ಒಡೆಯುವ ಪ್ರಯತ್ನಕ್ಕೆ ಕೈಹಾಕಿರುವುದು ನೋವಿನ ಸಂಗತಿಯೇ ಆಗಿದೆ.  ಸಮಾಧಾನಕರ ವಿಷಯವೆಂದರೆ ಈ ನಾಡೊಡೆಯುವ ಮಾತಿಗೆ ಜನರು ಹೆಚ್ಚಿನ ಮಹತ್ವ ನೀಡುತ್ತಿಲ್ಲ.
ಉತ್ತರ ಕರ್ನಾಟಕ = ಬೆಳಗಾವಿ ಮಾತ್ರವೇ?
ಇಂತಹದೊಂದು ಪ್ರಶ್ನೆಯನ್ನು ನಾವು ಈ ಹೊತ್ತು ಕೇಳಿಕೊಳ್ಳಲೇ ಬೇಕಾಗಿದೆ. ಗಡಿ ವಿವಾದದಿಂದಾಗಿ ಬೆಳಗಾವಿ ಕನ್ನಡಿಗರಿಗೆ ಭಾವನಾತ್ಮಕ ವಿಷಯವಾಗಿ ಎನ್ನುವುದು ದಿಟವೇ ಆಗಿದೆ. ಆದರೆ ಅದೇ ಹೊತ್ತಿನಲ್ಲಿ ಉತ್ತರ ಕರ್ನಾಟಕವೆಂದರೆ ಎಲ್ಲಾ ಯೋಜನೆಗಳನ್ನು ಕೇವಲ ಬೆಳಗಾವಿ ಮಾತ್ರ ಸೀಮಿತವಾಗಿಸುವ ಪ್ರಯತ್ನ ಮಾಡುತ್ತಿರುವ ರಾಜಕಾರಣಿಗಳ ನಡೆಯ ಬಗ್ಗೆ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ. ಏಕೀಕರಣದ ಪೂರ್ವದಿಂದಲೂ ಮುಂಬೈ ಕರ್ನಾಟಕಕ್ಕಿಂತಲೂ ಹೈದರಾಬಾದ್ ಕರ್ನಾಟಕ ಎಲ್ಲಾ ಹಂತಗಳಲ್ಲೂ ಹಿಂದುಳಿದಿರುವುದು ಡಾ. ಡಿ. ಎಂ. ನಂಜುಂಡಪ್ಪ ಅವರ ವರದಿ ಎಂದು ಹೇಳುತ್ತದೆ (ಗಮನಿಸಿ ಡಾ. ಡಿ. ಎಂ. ನಂಜುಂಡಪ್ಪ ಅವರ ವರದಿಯಲ್ಲಿ ಹೇಳಿರುವಂತೆ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮೈಸೂರು ಪ್ರಾಂತ್ಯಗಳಲ್ಲಿ ಹಲವಾರು ಭಾಗಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ) ಆದರೆ ಪ್ರತ್ಯೇಕತೆಯ ಬಗ್ಗೆ ಮಾತನಾಡುವ ರಾಜಕಾರಣಿಗಳೆಲ್ಲರೂ ಬೆಳಗಾವಿಯನ್ನೇ ಕೇಂದ್ರವಾಗಿಸಿಕೊಂಡು ಹೊಸರಾಜ್ಯ ಕಟ್ಟುವ ಬಗ್ಗೆ ಮಾತನಾಡುತ್ತಿರುವುದಾದರೂ ಏಕೆ? ಇವರ ಕಣ್ಣಿಗೆ ಕೊಪ್ಪಳ, ಯಾದಗಿರಿ, ಬೀದರ್, ಬಾಗಲಕೋಟೆ, ವಿಜಯಪುರ ಮುಂತಾದ ಹಿಂದುಳಿದ ಜಿಲ್ಲೆಗಳು ಕಾಣಿಸುತ್ತಿಲ್ಲವೇ? ಯಾಕೆ ಇವರುಗಳು ಎಲ್ಲಾ ಯೋಜನೆಗಳು ಬೆಳಗಾವಿಗೇ ಬರಬೇಕೆಂದು ಪಟ್ಟು ಹಿಡಿದಿರುವುದು? ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವವರಂತೆ ಮಾತನಾಡುತ್ತಾ ಇರುವ ಇವರುಗಳು ಬೇರೆ ಜಿಲ್ಲೆಗಳ ಅಭಿವೃದ್ಧಿಯ ಬಗ್ಗೆ ಗಮನಹರಿಸಿದ್ದಾರೆಯೇ?

ಇದರ ಮೂಲ ಕೆದಕಿದರೆ ಕಾಣುವುದು ಈ ರಾಜಕಾರಣಿಗಳ ಸ್ವಾರ್ಥ. ಬೆಳಗಾವಿಯಲ್ಲಿ ತಮ್ಮ ವ್ಯವಹಾರದ ಜಾಲವನ್ನೇ ಬೆಳೆಸಿಕೊಂಡಿರುವ ಇವರಿಗೆ ಬೆಳಗಾವಿ ಕೇಂದ್ರಿತ ರಾಜ್ಯವೊಂದು ಮಾಡುವುದಾದರೆ ಅದರ ಲಾಭವನ್ನು ಸುಲಭವಾಗಿ ತಾವೇ ಪಡೆಯಬಹುದು ಎನ್ನುವ ಸ್ವಾರ್ಥ ಮಾತ್ರವೇ ಇರುವುದು. ನಿಜವಾಗಿಯೂ ಇವರಿಗೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದಿದ್ದೇ ಆಗಿದ್ದರೆ ಉತ್ತರ ಕರ್ನಾಟಕದ ಅನೇಕ ಸಮಸ್ಯೆಗಳ ಬಗ್ಗೆ ಯಾವತ್ತಾದರೂ ಗಟ್ಟಿಧ್ವನಿಯಲ್ಲಿ ಮತನಾಡಿರುವುದನ್ನು ಕಂಡಿದ್ದೇವೆಯೇ? ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ಆಗಿರುವ ಅನ್ಯಾಯ, ಕಳಸಾ ಬಂಡೂರ ಕುಡಿಯುವ ನೀರಿನ ಯೋಜನೆ, ಗಡಿ ವಿವಾದ (ಇದೇ ನಾಯಕರುಗಳು ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲಿಕ್ಕೆ ಎಂ.ಇ.ಎಸ್ಸಿನವರ ಜೊತೆ ಕೈಜೋಡಿಸಿದ್ದಿದೆ), ಬರ ಪರಿಹಾರ, ಆರ್ಟಿಕಲ್ 371 ಜೆ ಅನುಷ್ಠಾನ ಮುಂತಾದ ವಿಷಯಗಳ ಬಗ್ಗೆ ಕಾಳಜಿ ತೋರಿಸಿದ್ದಾರೆಯೇ? ಮಾತೆತ್ತಿದರೆ ಬೇರೆ ರಾಜ್ಯವಾದರೆ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದು ಹೇಳುವ ಇವರು ಇದುವರೆಗೂ ಈ ಭಾಗದ ಅಭವೃದ್ಧಿಗೆ ತಾವು ರೂಪಿಸಿರುವ ಯೋಜನೆಗಳ ಬಗ್ಗೆ ಎಂದಿಗೂ ಮಾತನಾಡಿಲ್ಲ. ಉತ್ತರ ಕರ್ನಾಟಕ ಬೇರೆ ರಾಜ್ಯವಾಗುವುದರಿಂದಲೇ ಅಭಿವೃದ್ಧಿ ಸಾಧ್ಯ ಎನ್ನುವುದರ ಬಗ್ಗೆ ಇವರು ಏನಾದರೂ ಅಧ್ಯಯನ ಮಾಡಿದ್ದಾರೆಯೇ?

ಮೇಲಾಗಿ ಬೇಕೋ ಬೇಡವೋ ಈ ಪ್ರತ್ಯೇಕತೆಯಲ್ಲಿ ಜಾತಿ ರಾಜಕಾರಣವೂ ಸಹ ಬಹುದೊಡ್ಡ ಪಾತ್ರವೊಂದನ್ನು ವಹಿಸುತ್ತಿರುವುದು ಕಾಣಿಸುತ್ತಿದೆ. ಇಲ್ಲಿಯವರೆಗೂ ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತಿರುವ ರಾಜಕಾರಣಿಗಳೆಲ್ಲರೂ ಲಿಂಗಾಯಿತ ಜಾತಿಗೆ ಸೇರಿದವರಾಗಿರುವುದು ಕೇವಲ ಕಾಕತಾಳೀಯವಲ್ಲವೆನೋ ಎಂದು ಅನ್ನಿಸುತ್ತಿದೆ.

ಪ್ರತ್ಯೇಕತೆಯೇ ಪರಿಹಾರವಲ್ಲ
ಇಂದು ಕರ್ನಾಟಕ ಒಂದಾಗಿರುವುದರಿಂದ ಇದರ ಫಲ ಉಣ್ಣುತ್ತಿರುವವರು ಕೇವಲ ದಕ್ಷಿಣ ಕರ್ನಾಟಕದ ಜನರು ಮಾತ್ರವಲ್ಲ ಎನ್ನುವುದು ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿರುವ ರಾಜಕಾರಣಿಗಳಿಗೂ ಗೊತ್ತಿದೆ. ಒಂದು ವೇಳೆ ಉತ್ತರ ಕರ್ನಾಟಕವನ್ನು ಒಡೆದಿದ್ದೆ ಆದರೆ ಹೊಸ ರಾಜ್ಯಕ್ಕೆ ಬೇಕಾಗಿರುವ ಸಂಪನ್ಮೂಲ ಎಲ್ಲಿಂದ ತರುತ್ತಾರೆ? ಜನರಿಗೆ ಉದ್ಯೋಗಕ್ಕೆ ಏನು ಮಾಡುತ್ತಾರೆ? ಇಂದು ಬೆಂಗಳೂರು ರಾಜ್ಯ ಮೂಲೆ ಮೂಲೆಯಿಂದ ಬಂದ ಪ್ರತಿಯೊಬ್ಬರಿಗೂ ಕೆಲಸ ನೀಡುತ್ತಿದೆ. ರಾಜ್ಯ ಒಡೆದರೆ ಮುಂದೇನು? ಸಣ್ಣ ರಾಜ್ಯಗಳು ಕೇಂದ್ರದ ಅಡಿಯಾಳಾಗಬೇಕಾಗುತ್ತದೆ ಎನ್ನುವುದು ಇತ್ತೀಚಿಗೆ ಆಗಿರುವ ತೆಲಂಗಾಣ ಹಾಗೂ ಆಂಧ್ರಪ್ರದೇಶವನ್ನೇ ನೋಡಿದರೆ ಗೊತ್ತಾಗುತ್ತದೆ.


ನಮ್ಮಲ್ಲಿ ಇಂದು ಸಮಸ್ಯೆಗಳಿವೆ ನಿಜ. ಆದರೆ ಅವೇನು ಪರಿಹರಿಸಲು ಸಾಧ್ಯವಾಗದಂತಹ ಸಮಸ್ಯೆಗಳೇನಲ್ಲ. ಎಲ್ಲವೂ ಆಡಳಿತಕ್ಕೆ ಸಂಬಂಧಿಸಿರುವಂತಹವೇ. ಜನಪ್ರತಿನಿಧಿಗಳು ಮೈಯಲ್ಲ ಕಣ್ಣಾಗಿ ದುಡಿದರೆ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬಹುದಾದ ವಿಷಯಗಳೇ. ಆದರೆ ಕಡ್ಡಿಯನ್ನು ಗುಡ್ಡ ಮಾಡಿ ತಮ್ಮ ಸ್ವಾರ್ಥಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ನಾಡೊಡೆಯಲು ಹೊರಟಿರುವ ನಾಯಕರಿಗೆ ಜನರೇ ಪಾಠ ಕಲಿಸಬೇಕಾಗಿದೆ. ಕನ್ನಡ ನಾಡು ಹಿಂದೆ ಜಗತ್ತಿಗೆ ದಾರಿ ತೋರುವ ನಾಡಾಗಿತ್ತು ನಾವೆಲ್ಲ ಒಟ್ಟಾಗಿದ್ದರೆ ಮುಂದೆಯು ಅಂತಹ ದಿನಗಳು ಬರುವುದರಲ್ಲಿ ಸಂಶಯವೇ ಬೇಡ. ಒಗ್ಗಟ್ಟಿನಲ್ಲಿ ಬಲವಿದೆ, ಪ್ರತ್ಯೇಕತೆ ಪರಿಹಾರವಲ್ಲಾ.
ಚೇತನ್ ಜೀರಾಳ

Wednesday, April 22, 2015

ಮೇಕೆದಾಟು: ನ್ಯಾಯವಷ್ಟೇ ಅಲ್ಲಾ! ದಬ್ಬಾಳಿಕೆಗೆ ತಡೆಯೂ ಹೌದು!

ಕಾವೇರಿ ನದಿ ನೀರು ಹಂಚಿಕೆಯ ಹೋರಾಟಕ್ಕೆ ಮೇಕೆದಾಟು ಕುಡಿಯುವ ನೀರು ಯೋಜನೆ ಹೊಸ ಸೇರ್ಪಡೆಯಾಗಿದೆ.೨೦೦೭ರಲ್ಲಿ ಹೊರಬಂದ ಕಾವೇರಿ ಐತೀರ್ಪಿನಲ್ಲಿ ಕರ್ನಾಟಕವು ವಾರ್ಷಿಕ ೧೯೨ ಟಿಎಂಸಿಯಷ್ಟು ನೀರನ್ನು ಗೊತ್ತುಮಾಡಿದ ಪ್ರಮಾಣದಲ್ಲಿ ಹಂತಹಂತವಾಗಿ ಕರ್ನಾಟಕವು ತಮಿಳುನಾಡಿಗೆ ಹರಿಸಬೇಕು ಎಂಬ ಆದೇಶವಿದೆ. ಕಳೆದ ಹತ್ತುವರ್ಷಗಳಲ್ಲಿ ಕರ್ನಾಟಕದಿಂದ ಸರಾಸರಿ ೨೫೦ ಟಿಎಂಸಿಯಷ್ಟು ಅಂದರೆ ಸರಿಸುಮಾರು ೬೦ ಟಿಎಂಸಿ ನೀರು ಹೆಚ್ಚುವರಿಯಾಗಿ ನೀರನ್ನು ತಮಿಳುನಾಡಿಗೆ ಹರಿದಿದೆ. ಅಂದರೆ ಕರ್ನಾಟಕವು ತಮಿಳುನಾಡಿಗೆ ಸಾಮಾನ್ಯ ಮಳೆಗಾಲದ ವರ್ಷಗಳಲ್ಲಿ ನೀರಿಗೆ ಕೊರತೆಯಾಗದಂತೆ ನೀರು ಪೂರೈಕೆಮಾಡಿದೆ.

ಬೆಂಗಳೂರು ನಗರ ಕಾಲಾಂತರದಿಂದಲೂ ಕುಡಿಯುವ ನೀರಿಗಾಗಿ ಬಹುತೇಕ ಕಾವೇರಿ ನದಿಯನ್ನು ನಂಬಿಕೊಂಡಿದೆ. ತೀವ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನ ಜನಸಂಖ್ಯೆಯು ರಾಜ್ಯದ ಒಟ್ಟು ಜನಸಂಖ್ಯೆಯ ೧೬% ಇದ್ದು ಎಂಬತ್ತು ಲಕ್ಷವನ್ನು ದಾಟಿದೆ. ಬೆಳೆಯುತ್ತಿರುವ ಬೆಂಗಳೂರು ನಗರವೊಂದಕ್ಕೆ ಸದ್ಯ ೧೬ ಟಿಎಂಸಿಯಷ್ಟು ನೀರು ಬೇಕಿದ್ದು, ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಇದರ ಪ್ರಮಾಣ ೩೦ ಟಿಎಂಸಿ ಆಗಲಿದೆ. ಆದರೆ ವಾಸ್ತವವಾಗಿ ಕಾವೇರಿ ನದಿಯನ್ನು ಕುಡಿಯುವ ನೀರಿಗಾಗಿ ಬರಿ ಬೆಂಗಳೂರಲ್ಲದೆ ಕರ್ನಾಟಕದ ಇನ್ನೂ ನಾಲ್ಕಾರು ಜಿಲ್ಲೆಗಳು ಆಶ್ರಯಿಸಿವೆ. ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ನೆರೆಯ ಪ್ರದೇಶಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಇತರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಕರ್ನಾಟಕವು ತನ್ನ ಗಡಿಯಾದ ಮೇಕೆದಾಟುವಿನಲ್ಲಿ ಜಲಾಗಾರವನ್ನು ನಿರ್ಮಿಸಲು ಯೋಜಿಸಿದೆ. ಈ ಯೋಜನೆಯಂತೆ ಮೇಕೆದಾಟುವಿನಲ್ಲಿ ಕಣಿವೆಗೆ ಧುಮುಕುವ ಕಾವೇರಿಯಲ್ಲಿ ಸಹಜವಾದ ನೀರ್ಬೀಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಅಂಶವೂ ಸೇರಿದ್ದು, ಇದರಿಂದಾಗಿ ತಮಿಳುನಾಡಿಗೆ ಹರಿಯುವ ೧೯೨ ಟಿಎಂಸಿ ನೀರಿನ ಪ್ರಮಾಣಕ್ಕೆ ಯಾವುದೇ ಧಕ್ಕೆಯಾಗದು.

ಈ ಅಣೆಕಟ್ಟೆಯು ಇನ್ನೂ ಯೋಜನೆಯ ಹಂತದಲ್ಲಿದ್ದು ಇನ್ನೂ ವಿವರವಾದ ಯೋಜನಾ ವರದಿ ತಯಾರಾಗಬೇಕಿದೆ. ಇಲ್ಲಿ ಗಮನಿಸಬೇಕಾದ್ದು ಏನೆಂದರೆ ಕಾವೇರಿ ನದಿನೀರು ಹಂಚಿಕೆಯ ತೀರ್ಪು ಅದೆಷ್ಟೇ ಅನ್ಯಾಯದ್ದಾಗಿದ್ದರೂ ಕರ್ನಾಟಕ ಅದನ್ನು ಪಾಲಿಸುತ್ತಲೇ ಬಂದಿದೆ ಮತ್ತು ಮೇಕೆದಾಟು ಕುಡಿಯುವ ನೀರು ಅಣೆಕಟ್ಟು ಯೋಜನೆಯನ್ವಯ ಕರ್ನಾಟಕದಲ್ಲಿ ಬೀಳುವ ಹೆಚ್ಚುವರಿ ಮಳೆಯ ನೀರನ್ನು ಹಿಡಿದಿಟ್ಟುಕೊಂಡು ಕುಡಿಯುವ ನೀರು ಪೂರೈಕೆ ಮಾಡುವುದು. ಕಾವೇರಿ ಐತೀರ್ಪಿಗೆ ಒಳಪಟ್ಟಿರುವಂತೆಯೇ ಕರ್ನಾಟಕವು ಸದರಿ ಯೋಜನೆಯನ್ನು ರೂಪಿಸಿದ್ದು ಇದರಲ್ಲಿ ಒಟ್ಟು ಸುಮಾರು ೫೦ ಟಿಎಂಸಿ ನೀರನ್ನು ಕೂಡಿಡಲು ಉದ್ದೇಶಿಸಿದೆ. ಈಗ ತಾನು ಬಳಸಲು ಉದ್ದೇಶಿಸಿರುವ ಈ ನೀರು, ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿದು ಹೋಗುತ್ತಿರುವ ನೀರಾಗಿದೆ ಮತ್ತು ಈ ಯೋಜನೆಯ ಉದ್ದೇಶ ಕುಡಿಯುವ ನೀರುಪೂರೈಕೆಗಾಗಿ ಎಂಬ ಎರಡು ಬಲವಾದ ಅಂಶಗಳು ಕರ್ನಾಟಕದ ಬೆನ್ನಿಗಿವೆ.

ತಮಿಳುನಾಡು ಈಗ ಇದರ ವಿರುದ್ಧವಾಗಿ ಎತ್ತಿರುವ ತಕರಾರು ಮಾತ್ರಾ ತೀರಾ ಅನ್ಯಾಯ ಮತ್ತು ದುರುದ್ದೇಶದ್ದಾಗಿದೆ. ತಾನು ಮಾತ್ರಾ ಕುಡಿಯುವ ನೀರಿಗಾಗಿ ಹೊಗೇನಕಲ್ ದ್ವೀಪದ ಕರ್ನಾಟಕದ ಪಾಲಿನ ನೆಲದಲ್ಲಿ ಅಕ್ರಮವಾಗಿ ನೀರಾವರಿ ಯೋಜನೆ ಮಾಡಬಹುದು. ಅದನ್ನು ಪ್ರಶ್ನಿಸಿದರೆ ಕುಡಿಯುವ ನೀರಿನ ಮಾನವೀಯ ಬೇಡಿಕೆಯನ್ನು ಮುಂದಿಡುತ್ತದೆ. ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಮಾತ್ರಾ ತನ್ನ ಬೆಳೆಗಳಿಗೆ ನೀರು ಸಿಗುವುದಿಲ್ಲಾ ಎನ್ನುತ್ತಾ ವಿರೋಧ ತೋರಿಸುತ್ತದೆ. ಕರ್ನಾಟಕದಲ್ಲಿ ಯಾವುದೇ ನೀರಾವರಿ ಯೋಜನೆ, ಅಣೆಕಟ್ಟು ಕಟ್ಟುವುದು, ಕೆರೆಕುಂಟೆ ಹೂಳೆತ್ತಿ ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವುದನ್ನು ವಿರೋಧಿಸುತ್ತದೆ. ಮಾತೆತ್ತಿದರೆ ಸುಪ್ರೀಂಕೋರ್ಟ್ ಮತ್ತು ಸಂಸತ್ತಿನ ಮೆಟ್ಟಿಲೇರುವ ಚಾಳಿಯನ್ನು ರೂಪಿಸಿಕಂಡಿದ್ದು ಕರ್ನಾಟಕವು ತನ್ನ ಬಲಹೀನ ರಾಜಕೀಯ ಇಚ್ಛಾಶಕ್ತಿಯ ಕಾರಣದಿಂದ ಮುಖಭಂಗ ಮಾಡಿಸಿಕೊಳ್ಳುತ್ತಲೇ ಬಂದಿದೆ. ಈಗಿನ ತಮಿಳುನಾಡಿನ ಹುನ್ನಾರವೆಂದರೆ ಕಾವೇರಿ ಐತೀರ್ಪಿನ ಅನ್ವಯ ತನ್ನ ಪಾಲಿಗೆ ಕರ್ನಾಟಕ ಬೀಡಬೇಕಾದ ೧೯೨ ಟಿಎಂಸಿ ನೀರಲ್ಲದೆ ಹೆಚ್ಚುವರಿಯಾಗಿ ಹರಿಯುವ ನೀರೂ ತನ್ನ ನೆಲಕ್ಕೆ ಹರಿಯಬೇಕೆಂಬುದು. ಇದರ ಅರ್ಥ ಕರ್ನಾಟಕದ ಅಣೆಕಟ್ಟುಗಳಿರುವುದು ತಮಿಳುನಾಡಿಗೆ ಕಾಲಕಾಲಕ್ಕೆ ನೀರು ಪೂರೈಸುವ ಜಲಾಗಾರಗಳಾಗಲಿ ಇರಲಿಕ್ಕೆ ಎನ್ನುವುದಾಗಿದೆ.

ಐತೀರ್ಪಿನ ಅನ್ವಯ ಸಾಮಾನ್ಯ ಮಳೆಗಾಲದ ವರ್ಷದಲ್ಲಿ ೧೯೨ ಟಿಎಂಸಿ ನೀರನ್ನು ಹರಿಸಲು ಮಾತ್ರಾ ಬದ್ಧವಾಗಿದ್ದು ಉಳಿದಂತೆ ಹೆಚ್ಚುವರಿ ನೀರನ್ನು ತಾನೇ ಬಳಸಿಕೊಳ್ಳಲು ಯಾವುದೇ ಅಡ್ಡಿ ಎದುರಾದರೂ ಬದಿಗೆ ಸರಿಸಿ ಮುನ್ನಡೆಯಬೇಕು. ಇದಕ್ಕೆ ಗಟ್ಟಿಯಾದ ರಾಜಕೀಯ ಇಚ್ಛಾಶಕ್ತಿ, ಕಾನೂನಿನ ಆಳವಾದ ಅರಿವು, ತೀವ್ರಗತಿಯಲ್ಲಿ ಯೋಜನೆಯನ್ನು ಪೂರೈಸುವ ಛಲ ಬೇಕು ಅಷ್ಟೇ!
- ಆನಂದ್ ಜಿ.