ಏನಿದು ವಿಭಜನೆ?
ಬೆಂಗಳೂರು ಮಹಾನಗರ ಪಾಲಿಕೆ ಸುತ್ತಲಿನ ನೂರಾರು ಹಳ್ಳಿಗಳನ್ನು ಸೇರಿಸಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿದೆ. ಇಲ್ಲಿ ಆಡಳಿತವನ್ನು ನಿಭಾಯಿಸಲು ಕಷ್ಟ ಇರುವುದರಿಂದ ಇದನ್ನು ಮೂರು ಪಾಲಿಕೆಗಳಾಗಿ ಮಾಡಲು ಯೋಜಿಸಲಾಗಿದೆ. ಒಟ್ಟು ೧೯೮ ವಾರ್ಡುಗಳ ಬಿಬಿಎಂಪಿಯನ್ನು ೪೭ ವಾರ್ಡುಗಳ ಪೂರ್ವ, ೫೭ ವಾರ್ಡುಗಳ ಪಶ್ಚಿಮ ಮತ್ತು ೯೪ ವಾರ್ಡುಗಳ ಕೇಂದ್ರವಲಯವಾಗಿಸುವ ಉದ್ದೇಶವಿದೆ. ಪೂರ್ವದಲ್ಲಿ ಬೊಮ್ಮನಹಳ್ಳಿ, ಸಿ ವಿ ರಾಮನ್ ನಗರ, ಶಾಂತಿನಗರ, ಬಿಟಿಎಂ ಲೇಔಟ್, ಮಹದೇವಪುರ, ಕೆ ಆರ್ ಪುರ ವಿಧಾನಸಭಾ ಕ್ಷೇತ್ರಗಳಿವೆ. ಈ ಪೂರ್ವ ಬೆಂಗಳೂರಿನಲ್ಲಿಯೇ ದೊಡ್ಡದೊಡ್ಡ ಉದ್ದಿಮೆಗಳ ಪ್ರದೇಶಗಳಿವೆ. ಇಲ್ಲಿ ಮೂರು ಪಾಲಿಕೆಗಳೂ, ಮೂರು ಮೇಯರುಗಳ ಮೂರು ಪಾಲಿಕೆ ಕಛೇರಿಗಳೂ ಉಂಟಾಗಲಿವೆ.
ವಿಭಜನೆಯ ತೊಡಕುಗಳು
ಬೆಂಗಳೂರಿನ ಕೆಲವು ಭಾಗಗಳಲ್ಲಿ ಯೋಜಿಸಿ ಉದ್ದಿಮೆಗಳ ವಲಯಗಳನ್ನಾಗಿ ಮಾಡಲಾಗಿದೆ, ಇಲ್ಲೆಲ್ಲಾ ಉದ್ಯೋಗವನ್ನರಸಿ ಬಂದ ವಲಸಿಗರೇ ಹೆಚ್ಚು ನೆಲೆಸಿದ್ದು ಇಲ್ಲಿಂದ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿರುವುದೂ ಅವರುಗಳೇ ಆಗಿದ್ದಾರೆ. ನಾಳೆ ಬೇರೆಯಾಗುವ ಪಾಲಿಕೆಯಲ್ಲಿ ಇವರದ್ದೇ ದೊಡ್ಡಸಂಖ್ಯೆಯಾದರೆ ಆ ಭಾಗಗಳ ಆಡಳಿತದ ಚುಕ್ಕಾಣಿ ಕನ್ನಡಿಗರ ಕೈತಪ್ಪಲಿದೆ. ಇಲ್ಲಿ ಪಾಲಿಕೆಗೆ ವಲಸಿಗರು ಆಯ್ಕೆಯಾಗುತ್ತಾರೆ ಎನ್ನುವುದು ಸಮಸ್ಯೆಯಲ್ಲಾ. ಆಯ್ಕೆಯಾದವರು ಕನ್ನಡನಾಡಿನ ಮುಖ್ಯವಾಹಿನಿಯ ಭಾಗವಾಗದೇ ಇಡೀ ಪಾಲಿಕೆಯನ್ನು ಕನ್ನಡದ ಮುಖ್ಯವಾಹಿನಿಯಿಂದ ಬೇರ್ಪಡಿಸುವ ಕೆಲಸಕ್ಕೆ ಇಳಿಯಲಿದ್ದಾರೆ ಎನ್ನುವುದು ಸಮಸ್ಯೆ. ಬೆಂಗಳೂರನ್ನು ಒಡೆಯುವುದು ಇಡೀ ಬೆಂಗಳೂರನ್ನು “ಬರಿಯ ಒಂದು ಸಂಪನ್ಮೂಲವಾಗಿ ನೋಡುವ ವಲಸಿಗರ ಕೈಗೆ ಅಧಿಕಾರದ ಚುಕ್ಕಾಣಿ” ಒಪ್ಪಿಸಲು ಕಾರಣವಾದಂತಾಗುತ್ತದೆ.
ಈಗ ಮಾಡಲು ಉದ್ದೇಶಿಸಿರುವ ವಿಭಜನೆಯಿಂದಾಗಿ ಬೆಂಗಳೂರು ಆರ್ಥಿಕವಾಗಿಯೂ, ಭಾಷಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಮೂರು ದಿಕ್ಕು ಹಿಡಿಯುವುದಲ್ಲದೆ ಇಲ್ಲಿ ಸಂಪನ್ಮೂಲ ಕ್ರೋಢೀಕರಣದಲ್ಲಿ ತೀವ್ರ ತಾರತಮ್ಯವಾಗಲಿದೆ. ಕುಡಿಯುವ ನೀರು ಹಂಚಿಕೆಯೂ ಸೇರಿದಂತೆ ಸಂಪನ್ಮೂಲ ಹಂಚಿಕೆಯಲ್ಲೂ ತೊಡಕಾಗಲಿದೆ. ಇಷ್ಟೇ ಸಾಲದಂತೆ ಬೆಳವಣಿಗೆಯೂ ಸಮಗ್ರವಾಗಿ ನಡೆಯದೆ ಹೋಗಬಹುದಾಗಿದೆ. ಈಗ ಬೆಂಗಳೂರಿನ ಬಗ್ಗೆ ಮೂರು ಭಾಗ ಮಾಡುವ ನಿಲುವು ತೆಗೆದುಕೊಳ್ಳುವುದು ನಾಳೆ ಕರ್ನಾಟಕವನ್ನು ಒಡೆಯುವವರನ್ನು ಖಂಡಿತಾ ಉತ್ತೇಜಿಸುತ್ತದೆ.
ಆಡಳಿತ ಸುಧಾರಣೆ ಎನ್ನುವುದು ಕಾರಣವಲ್ಲಾ ನೆಪ!
ಪಾಲಿಕೆಯನ್ನು ಒಡೆಯಲು ಸರ್ಕಾರವು ನೀಡುತ್ತಿರುವ ಕಾರಣ ಆಡಳಿತ ಸುಧಾರಣೆ. ಆಡಳಿತ ಘಟಕವು ಸಣ್ಣದಾದಷ್ಟೂ ಆಡಳಿತ ಅನುಕೂಲಕರ ಎನ್ನುವ ವಾದ ಸರಿಯೇ ಆಗಿದ್ದರೂ ಬರಿಯ ಸುಲಭವಾದ ಆಡಳಿತವೆನ್ನುವುದೊಂದೇ ಒಡೆಯಲು ಮಾನದಂಡವಾಗಲಾರದು. ಬೆಂಗಳೂರು ಮೂರು ತುಂಡಾಗುವುದರಿಂದ ಹೇಗೆ ಆಡಳಿತ ಸುಧಾರಣೆಯಾಗುತ್ತದೆ ಎಂಬ ಬಗ್ಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಲು ಸರ್ಕಾರಕ್ಕೂ ಆಗುತ್ತಿಲ್ಲಾ. ಬೆಂಗಳೂರು ಅಷ್ಟಕ್ಕೂ ನಿಭಾಯಿಸಲಾಗದಷ್ಟು ದೊಡ್ಡದೇನೂ ಅಲ್ಲಾ. ಈಗಾಗಲೇ ಮೂರು ಭಾಗವಾಗಿರುವ ದೆಹಲಿ ಪಾಲಿಕೆ, ಇದೀಗ ಹೊಂದಾಣಿಕೆಯ ಸಮಸ್ಯೆಯ ಕಾರಣಕ್ಕಾಗಿ ಮತ್ತೆ ಒಂದಾಗಲು ಹವಣಿಸುತ್ತಿದೆ. ಚೆನ್ನೈ, ಮುಂಬೈ, ಕೊಲ್ಕೋತಾ, ಹೈದರಾಬಾದ್ ಸೇರಿದಂತೆ ದೇಶದ ಯಾವ ನಗರಗಳಿಗೂ ಅವುಗಳ ವಿಸ್ತಾರ ಮತ್ತು ಜನಸಂಖ್ಯೆಗಳು, ಉತ್ತಮ ಆಡಳಿತಕ್ಕೆ ಸಮಸ್ಯೆಯಾಗಿಲ್ಲದೇ ಇದ್ದಾಗ ಬೆಂಗಳೂರಿನಲ್ಲಿ ಮಾತ್ರಾ ಅಂಥಾ ಸಮಸ್ಯೆ ಇದೆ ಎನ್ನುವುದನ್ನು ನಂಬಲಾಗದು. ಸಮಸ್ಯೆ ಇದೆ ಎನ್ನುವುದನ್ನು ನಿಜವೆಂದೇ ನಂಬಿದರೂ ಅದು ನಮ್ಮಲ್ಲಿ ಆಡಳಿತ ನಡೆಸುವವರಿಗೆ ಕ್ಷಮತೆ ಇಲ್ಲದಿರುವುದಕ್ಕೆ ಪುರಾವೆಯಾಗುತ್ತದೆ. ಸಮಸ್ಯೆ ಇಲ್ಲಿದ್ದಾಗ ಮೂರಲ್ಲಾ ನೂರು ಭಾಗ ಮಾಡಿದರೂ ಸುಧಾರಣೆಯಾಗುತ್ತದೆ ಎಂಬುದನ್ನು ನಂಬಲಾಗುವುದೇ?
ಹಾಗೆ ನೋಡುವುದಾದರೆ ಈಗೆಲ್ಲಾ ಪರಿಣಾಮಕಾರಿ ಆಡಳಿತಕ್ಕಾಗಿ ಪ್ರತ್ಯೇಕತೆ ಎನ್ನುವುದು, ಪ್ರತ್ಯೇಕತೆಗಾಗಿ ಹಟ ಹಿಡಿದವರ ಒಂದು ತಂತ್ರವಾಗಿ ಬಳಕೆಯಾಗುತ್ತಿದೆ ಅಷ್ಟೇ! ಬಿಬಿಎಂಪಿಯಲ್ಲಿ ಗದ್ದುಗೆಯೇರಲು ಕಾಂಗ್ರೆಸ್ ಮಾಡುತ್ತಿರುವ ತಂತ್ರಗಾರಿಕೆಯಲ್ಲಿ ಒಂದು ಜಾತಿಯ ಜನರ ಬಲಕುಗ್ಗಿಸುವ ಪ್ರಯತ್ನವಾಗಿ, ಪರಭಾಷಿಕರನ್ನು ಪ್ರತಿಷ್ಠಾಪಿಸುವ ಕೆಲಸಕ್ಕೆ ಮುಂದಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿರುವುದು ನಿಜವಾಗಿದ್ದಲ್ಲಿ ಇದು ಕನ್ನಡಿಗರ ಪಾಲಿನ ಆತ್ಮಹತ್ಯಾತ್ಮಕ ನಡೆ ಎನ್ನದೇ ವಿಧಿಯಿಲ್ಲ.
- ಆನಂದ್ ಜಿ.
