Wednesday, June 24, 2015

ಕನ್ನಡಿಗರು ತೀರ್ಮಾನ ಮಾಡಬೇಕಾದ್ದು....



ಇತ್ತೀಚಿಗೆ ಉತ್ತರ ಕರ್ನಾಟಕದ ಏಳಿಗೆಗಾಗಿ ಜನಜಾಗೃತಿ ಮಾಡುತ್ತೇವೆ ಎಂದು ಹೇಳುತ್ತಾ, ದೇವರ ಹಿಪ್ಪರಗಿ ಶಾಸಕರಾದ ಶ್ರೀ ನಡಹಳ್ಳಿ ಎ. ಎಸ್ ಪಾಟೀಲರು ವಿಜಯಪುರದಿಂದ ರಾಯಚೂರಿಗೆ ಪಾದಯಾತ್ರೆ ಯೋಜಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗಿಗೆ ಆಂದೋಲನದ ರೂಪ ನೀಡಲು ಮುಂದಾಗಿದ್ದಾರಂತೆ.

ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದ ಉದ್ದಗಲಕ್ಕೂ ಹಿಂದುಳಿದ ತಾಲ್ಲೂಕುಗಳಿದ್ದು ಈ ಎಲ್ಲಾ ತಾಲ್ಲೂಕುಗಳ ಏಳಿಗೆಯ ಬಗ್ಗೆ ಯಾರೇ ಮಾತಾಡುವುದು ಪ್ರಬುದ್ಧ ನಡೆಯಾಗುತ್ತದೆ. ಉತ್ತರದ ಹತ್ತು ಜಿಲ್ಲೆಯ ಹಿಂದುಳಿದಿರುವಿಕೆಯ ಬಗ್ಗೆ ಮಾತ್ರಾ ಯೋಚಿಸುವುದಕ್ಕಿಂತಲೂ ಎಲ್ಲೆಡೆಯ ಹಿಂದುಳಿದ ತಾಲ್ಲೂಕುಗಳ ಬಗ್ಗೆ ಕಾಳಜಿ ತೋರಿಸುವುದು ಮೇಲ್ಮಟ್ಟದ ಯೋಚನೆ ಎನ್ನುವುದೇ ದಿಟವಾಗಿದ್ದರೂ ಕನ್ನಡ ಜನತೆ ಸದ್ಯ ಈ ಆಂದೋಲನದ ಬಗ್ಗೆ ಯೋಚಿಸಬೇಕಾಗಿದೆ.

ಕರ್ನಾಟಕದ ಉತ್ತರ ಭಾಗದ ಹಲವು ತಾಲ್ಲೂಕುಗಳು ಹಿಂದುಳಿದಿರಲು, ಆ ಭಾಗದ ಪರಾಡಳಿತದ ಇತಿಹಾಸ ಮತ್ತು ಇಂದಿನ ರಾಜಕಾರಣಿಗಳೇ ಮುಖ್ಯಕಾರಣ ಎಂಬ ವಾಸ್ತವವನ್ನು ನಾವೆಲ್ಲಾ ತಿಳಿಯಬೇಕಾಗಿದೆ. ಅಂತೆಯೇ ಈಗ ಕನ್ನಡಿಗರು ಈಗ  ನಾವು ಏನು ಮಾಡಿದರೆ ಹಿಂದುಳಿದ ಭಾಗಗಳ ಏಳಿಗೆಯಾದೀತು ಎಂದು ವಿವೇಕದಿಂದ ಯೋಚಿಸಿ ಹಾಗೆ ನಡೆಯುವುದನ್ನು ಮಾಡಬೇಕಾಗಿದೆ.

ಭಾರತದಂತಹ ಹುಸಿ ಒಕ್ಕೂಟದಲ್ಲಿ, ರಾಜ್ಯಗಳ ಅಸಮಾನ ಪ್ರತಿನಿಧಿ ವ್ಯವಸ್ಥೆ ಇರುವಲ್ಲಿ, ಒಂದು ರಾಜ್ಯದ ಸಂಸದರ ಸಂಖ್ಯೆಯೇ ಅದರ ಹಣೆಬರಹ ತೀರ್ಮಾನಿಸುತ್ತದೆ ಎಂಬ ಏರ್ಪಾಟಿನಲ್ಲಿ ನಾವಿರುವಾಗ ಇಡಿಯ ಕರ್ನಾಟಕವನ್ನು ಒಂದಾಗಿ ಉಳಿಸಿಕೊಳ್ಳುವುದರಲ್ಲೇ ನಮ್ಮ ಏಳಿಗೆಯಿದೆ. ಉತ್ತರದವರು, ದಕ್ಷಿಣದ ಮಂದಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಹುಸಿ ಆರೋಪದ ಪ್ರಚಾರವನ್ನು ಕುರುಡಾಗಿ ನಂಬದೆ ತಾಳೆ ಹಾಕಿ ನೋಡಬೇಕಾಗಿದೆ. ಕರ್ನಾಟಕದ ಪ್ರತಿ ನೂರು ರೂಪಾಯಿ ಆದಾಯದಲ್ಲಿ 71 ರೂಪಾಯಿ ಬರುವುದು ಬೆಂಗಳೂರು, ಮೈಸೂರು ವಿಭಾಗದಿಂದ. ಉತ್ತರದ ಭಾಗದಿಂದ ಹುಟ್ಟುವುದು 29%ದಷ್ಟು. ಕರ್ನಾಟಕದ ಒಟ್ಟು ಜನಸಂಖ್ಯೆಯ 42% ಇರುವ ಉತ್ತರದ ಭಾಗಕ್ಕೆ ಹಂಚಿಕೆಯಾಗುವುದು ಸುಮಾರು 60 ರೂಪಾಯಿಯಷ್ಟು. ನಾಳೆ ಬೇರೆ ಹೋಗುವುದರಿಂದ ಈ ಆದಾಯದ ಮೂಲ ಅರ್ಧಕ್ಕೆ ಇಳಿಯುವುದಿಲ್ಲವೇ? ಅಂದರೆ ಈಗಿನ ಹಂಚಿಕೆಗಿಂತಾ ಕಡಿಮೆ ಆದಾಯ ಬರುವುದಾದಲ್ಲಿ ಏಳಿಗೆಯಿಂದ ದೂರಸರಿಯುವುದಲ್ಲದೆ ಎಲ್ಲದಕ್ಕೂ ಕೇಂದ್ರದ ಸಹಾಯಕ್ಕಾಗಿ ಕೈಚಾಚಬೇಕಾಗುತ್ತದೆ. ಅದೇ ರೀತಿಯಲ್ಲಿ ಉತ್ತರದ ಜಿಲ್ಲೆಗಳನ್ನು ಕಳೆದುಕೊಳ್ಳುವ ದಕ್ಷಿಣ ಕರ್ನಾಟಕ ಅನೇಕ ವಿಷಯಗಳಲ್ಲಿ ಬಡವಾಗುತ್ತದೆ. ನೆರೆಯ ತಮಿಳುನಾಡಿನ ಎಐಡಿಎಂಕೆ, ಡಿಎಂಕೆಗಳು ಕೇಂದ್ರಸರ್ಕಾರವನ್ನು ತಮ್ಮ ಸಂಸದರ ಬಲದಿಂದ ಹೇಗೆ ಪ್ರಭಾವಿಸುತ್ತವೆ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯವೇ ಆಗಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಸಹಜವಾದ ನುಡಿಯ ರಾಷ್ಟ್ರೀಯತೆ ಹೊಂದಿರುವ ಕನ್ನಡಿಗರು ಒಂದಾಗಿದ್ದುದ್ದು ಮುಂದೆ ಒಡೆಯುವುದು ನಮ್ಮ ಏಳಿಗೆಗೆ ತೀವ್ರವಾದ ಪೆಟ್ಟು ನೀಡುವುದು ಖಂಡಿತಾ.

ಇನ್ನು ಈಗಾಗಲೇ ಸಂವಿಧಾನದ 371ಜೆ ವಿಧಿಯ ಮೂಲಕ ದೊರೆತಿರುವ ಮತ್ತೊಂದು ಅನುಕೂಲದ ಅನ್ವಯ ಹೈದರಾಬಾದ್ ಕರ್ನಾಟಕ ಭಾಗದ ಮಂದಿಗೆ ಉದ್ಯೋಗ ನೇಮಕಾತಿಯಲ್ಲಿ ರಾಜ್ಯದ ಉಳಿದೆಡೆ ನೂರಕ್ಕೆ ಎಂಟರಷ್ಟು ಮೀಸಲಾತಿ ಸಿಗಲಿದ್ದು ಪ್ರತ್ಯೇಕ ರಾಜ್ಯವಾಗುವುದಾದರೆ ಆ ನಂತರ ಈ ಸವಲತ್ತು ಇಲ್ಲವಾಗುವುದಿಲ್ಲವೇ?

ಜನರ ಮನಸ್ಸಲ್ಲಿ ವೈಷಮ್ಯ ಹುಟ್ಟುಹಾಕಲು ಪ್ರತ್ಯೇಕತೆಯ ಪ್ರತಿಪಾದಕರು ತಾರತಮ್ಯದ ಆರೋಪ ಹೊರಿಸುತ್ತಾರೆ. ನೀರಾವರಿಯಾದ ಪ್ರದೇಶದ ಪ್ರಮಾಣವಾಗಲೀ, ಸಾರಿಗೆ ಸಂಪರ್ಕದಲ್ಲಾಗಲೀ 1956ಕ್ಕೂ ಇಂದಿಗೂ ಸಾಕಷ್ಟು ಏಳಿಗೆಯಾಗಿದೆ. ಅಂಕಿ ಅಂಶಗಳು ಅದಕ್ಕೆ ಪೂರಕವಾಗೇ ಇದೆ. ಉತ್ತರದ ರಾಜಕಾರಣಿಗಳು ಮುಖ್ಯಮಂತ್ರಿಗಳಾಗಿಲ್ಲಾ ಎಂಬ ಪ್ರಚಾರ ಎಷ್ಟು ಹುಸಿಯೆಂದರೆ ಸುಮಾರು ಮೂವತ್ತು ವರ್ಷ ಕಾಲ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆ ಭಾಗದವರಾಗಿದ್ದಾರೆ. ವಾಸ್ತವವಾಗಿ ಬೇರೆಲ್ಲಾ ಕಡೆಯಂತೆಯೇ ನಮ್ಮಲ್ಲಿ ಮುಖ್ಯಮಂತ್ರಿಗಳಾಗಿರುವುದು ಅವರ ಜಾತಿ ವರ್ಗದ ಕಾರಣದಿಂದಲೇ ಹೊರತು ಪ್ರದೇಶದ ಕಾರಣದಿಂದಲ್ಲಾ.

ಏಳಿಗೆಯ ದೃಷ್ಟಿಯಿಂದ 1956ರಲ್ಲಿ ಇದ್ದ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಸಾಕಷ್ಟು ಅಂತರವಿದ್ದು ಇದೀಗ ದೊಡ್ಡ ಪ್ರಮಾಣದಲ್ಲಿ ಉತ್ತರ ದಕ್ಷಿಣದ ನಡುವಿನ ಅಂತರ ಕಡಿಮೆತಯಾಗಿರುವುದನ್ನು ಈ ಅಂಕಿ ಅಂಶಗಳು ತೋರಿಸುತ್ತಿವೆ. ವಾಸ್ತವವಾಗಿ ತಾರತಮ್ಯ ಆಗಿಲ್ಲಾ ಎನ್ನುವುದನ್ನು ಮನಗಾಣಲು ಹಿಂದುಳಿದ ತಾಲ್ಲೂಕುಗಳು ಉತ್ತರ ದಕ್ಷಿಣ ಎಲ್ಲಾ ಕಡೆ ಸಮನಾಗಿ ಹರಡಿರುವುದೇ ಸಾಕಾಗಿದೆ.

ಈ ಎಲ್ಲಾ ಹೋಲಿಕೆ ಹೇಳಿಕೆಗಳಿಗಿಂತಾ ಮುಖ್ಯವಾದದ್ದು ಹಿಂದುಳಿದ ಭಾಗಗಳು ಮುಂದುವರೆಯಬೇಕು ಎನ್ನುವುದು. ಹೀಗೆ ಆಗಲು ನಾವು ಯಾವುದರಿಂದ ಏಳಿಗೆಯ ಸಾಧ್ಯತೆ ಹೆಚ್ಚಾಗಿದೆಯೋ ಆ ದಾರಿ ಹಿಡಿಯಬೇಕು ಎಂಬುದಕ್ಕೆ ಮಹತ್ವ ಕೊಡಬೇಕು. ಏಳಿಗೆಯೆಡೆಗೆ ಪ್ರಮುಖಹೆಜ್ಜೆ ಅಧಿಕಾರದ ಸೂಕ್ತ ವಿಕೇಂದ್ರಿಕರಣವೇ ಆಗಿದೆ. ಅದು ಬಿಟ್ಟು ಒಡಕಿನ ದಾರಿ ಹಿಡಿದರೆ ಕೇಂದ್ರಸರ್ಕಾರದ ಮುಂದೆ ಎರಡೂ ಭಾಗದ ಮಂದಿ ಕೈಒಡ್ಡಿ ನಿಲ್ಲಬೇಕಾಗುತ್ತದೆ. ಹುಸಿ ರಾಷ್ಟ್ರೀಯವಾದಿಗಳಿಗೆ ಬೇಕಿರುವುದೂ ಇದೇ ತಾನೇ? ಬಲಿಷ್ಠವಾದ ಕೇಂದ್ರ ಮತ್ತು ಬಲಹೀನ ರಾಜ್ಯಗಳ ಸೃಷ್ಟಿಯನ್ನೇ ಸಿದ್ಧಾಂತವಾಗಿಸಿಕೊಂಡ ಸಂಘಟನೆಗಳ ಗರಡಿಯಲ್ಲಿ ಬೆಳೆದ ಮಂದಿಯ ಗುರಿಯೂ ಇದೇ ತಾನೇ? ಕನ್ನಡಿಗರು ಒಟ್ಟಾರೆ ಕರ್ನಾಟಕದ ಎಲ್ಲಾ ಭಾಗಗಳ ಏಳಿಗೆಯನ್ನು ಪ್ರತಿಪಾದಿಸುವವರ ಕೈಹಿಡಿಯಬೇಕೋ, ಆಯ್ದ ಕೆಲಭಾಗಗಳ ಬಗ್ಗೆ ಮಾತ್ರಾ ಮಾತಾಡುವವರನ್ನು ಬೆಂಬಲಿಸಬೇಕೋ, ಕಟ್ಟುವವರ ಕೈಹಿಡಿಯಬೇಕೋ, ಒಡೆಯುವವರ ಕೈಜೋಡಿಸಬೇಕೋ ತೀರ್ಮಾನಿಸಬೇಕಾಗಿದೆ.

 - ಆನಂದ್

Tuesday, June 9, 2015

ಕರ್ನಾಟಕಕ್ಕೊಂದು ಪ್ರಾದೇಶಿಕ ಪಕ್ಷ ಕಟ್ಟಲು ಇದು ಸಕಾಲ


ಕನ್ನಡದ ಎರಡು ಸಾವಿರ ವರುಶಗಳ ಇತಿಹಾಸದ ಮೇಲೊಮ್ಮೆ ಕಣ್ಣು ಹಾಯಿಸಿದರೆ ಮುಕ್ಕಾಲು ಪಾಲು ಅವಧಿಯಲ್ಲಿ ಕನ್ನಡ ನಾಡನ್ನಾಳಿದ ರಾಜಮನೆತನಗಳು ಇಡೀ ಭಾರತದಲ್ಲಿ ಬೀರಿದ ಪ್ರಭಾವ, ಮಾಡಿದ ಸಾಧನೆಗಳು ನಮ್ಮ ಗಮನ ಸೆಳೆದರೆ ತದನಂತರದ ಕಾಲು ಪಾಲು ಅವಧಿಯಲ್ಲಿ ಪರಕೀಯರ ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿದ್ದು, ನಮ್ಮ ಮೇಲಿನ ನಂಬಿಕೆಯನ್ನೇ ನಾವು ಕಳೆದುಕೊಂಡಿದ್ದು, ಕಷ್ಟ ಪಟ್ಟು ಏಕೀಕರಣ ಸಾಧಿಸಿದ್ದು, ಆನಂತರ ಸ್ವತಂತ್ರ ಭಾರತದ ಒಕ್ಕೂಟದಲ್ಲಿ ರಾಜಕೀಯವಾಗಿ ಯಾವುದೇ ಪ್ರಭಾವ ಬೀರದೇ ಇತರರಿಗೆ ಬರೀ ಚಪ್ಪಾಳೆ ಹೊಡೆಯುವ ಹಂತದಲ್ಲೇ ನಿಂತು ಹೋಗಿರುವ ದುರಂತ ಕಾಣಿಸುತ್ತೆ. ಸ್ವಾತಂತ್ರ್ಯ ಬಂದ ನಂತರದ ಅವಧಿಯಲ್ಲಿ ಕನ್ನಡಕ್ಕೆ ಶಿಕ್ಷಣ, ಆಡಳಿತ ಹೀಗೆ ಕೆಲವು ವಿಷಯಗಳಲ್ಲಿ ಒಂದಿಷ್ಟು ಬಲ ಬಂದರೂ ರಾಜಕೀಯವಾಗಿ ಕನ್ನಡಕ್ಕೆ ಒಂದು ಬಲ ತಂದುಕೊಳ್ಳದೇ ಕನ್ನಡವೆಂದರೆ ಸಾಹಿತ್ಯ, ಸಂಗೀತ, ಸಿನೆಮಾದಂತಹ ಜುಟ್ಟಿನ ಮಲ್ಲಿಗೆಗೆ ನಮ್ಮ ಆಲೋಚನೆಯನ್ನು ಸೀಮಿತಗೊಳಿಸಿಕೊಂಡಿದ್ದು ನಮ್ಮೆಲ್ಲ ಸಮಸ್ಯೆಗಳ ಮೂಲದಲ್ಲಿದೆ. ಜಾಗತೀಕರಣ, ತಂತ್ರಜ್ಞಾನದಲ್ಲಾಗಿರುವ ಕ್ಷಿಪ್ರ ಬದಲಾವಣೆ, ಇದರ ಬೆನ್ನಲ್ಲೇ ಆಗಿರುವ ಅನಿಯಂತ್ರಿತ ಪರನುಡಿಯವರ ವಲಸೆ ನಮ್ಮ ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸಿವೆ.

ಕನ್ನಡ ಕೇಂದ್ರಿತವಾದ ರಾಜಕಾರಣ ಮಾಡುವ ಒಂದೇ ಒಂದು ರಾಜಕೀಯ ಪಕ್ಷವನ್ನ ನಾವು ಕಟ್ಟಿಕೊಳ್ಳದಿರುವುದರ ಪರಿಣಾಮ ವಿಧಾನಸೌಧದಲ್ಲಿ ಆಗುವ ಚರ್ಚೆಗಳಲ್ಲಿ ಕಾಣಬಹುದು. ಕನ್ನಡ, ಕನ್ನಡಿಗರ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳ ವಿಷಯಗಳು ಚರ್ಚೆಗೆ ಬರುವುದಾಗಲಿ, ಬಂದರೂ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರತ್ತ ಕೆಲಸ ಮಾಡುವ ನಿಷ್ಟೆ, ಕಾಳಜಿಯನ್ನಾಗಲಿ ನೋಡಲು ನಮಗೆ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ನದಿ ನೀರಿನ ಹಂಚಿಕೆಯಿರಬಹುದು, ರಸ್ತೆ,ರೈಲುಗಳ ಸೌಕರ್ಯದ ವಿಷಯವಿರಬಹುದು, ಕೇಂದ್ರದಿಂದ ನ್ಯಾಯವಾಗಿ ದಕ್ಕಬೇಕಾದ ಯೋಜನೆ, ಅನುದಾನಗಳಿರಬಹುದು, ಗಡಿಯ ವಿಚಾರವಿರಬಹುದು, ಕರ್ನಾಟಕದಲ್ಲಿ ಕನ್ನಡ, ಕನ್ನಡಿಗನ ಸಾರ್ವಭೌಮತ್ವದ ವಿಚಾರವಿರಬಹುದು, ಹೀಗೆ ಪ್ರತಿಯೊಂದರಲ್ಲೂ ನಾವು ಹೀನಾಯವಾದ ಸ್ಥಿತಿ ತಲುಪಿದ್ದೇವೆ.

ನಮ್ಮ ನಾಡಿನ ರಾಜಕಾರಣವನ್ನು ಕನ್ನಡ ಬಿಟ್ಟು ಇನ್ನೆಲ್ಲ ತರದ ವಾದಗಳು, ಸಿದ್ಧಾಂತಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಹೊತ್ತಿನಲ್ಲಿ ಕಳೆದ ಹದಿನೈದು ವರ್ಷಗಳಲ್ಲಿ ಒಂದು ಸಣ್ಣ ಸಮಾಧಾನವೆಂಬಂತೆ ತಲೆ ಎತ್ತಿದ್ದು ಕರ್ನಾಟಕ ರಕ್ಷಣಾ ವೇದಿಕೆ ಅನ್ನುವ ಸಂಘಟನೆ. ಹದಿನೈದು ವರ್ಷಗಳಲ್ಲಿ ಕಾವೇರಿ, ಕೃಷ್ಣಾ ನದಿಯ ವಿಚಾರವಿರಬಹುದು, ಕಳಸಾಬಂಡೂರಿಯಂತಹ ಕುಡಿಯುವ ನೀರಿನ ವಿಚಾರವಿರಬಹುದು, ರೈಲ್ವೇ ಮತ್ತು ಬ್ಯಾಂಕ್ ನೇಮಕಾತಿಯಂತಹ ವಿಷಯವಿರಬಹುದು, ಕರ್ನಾಟಕದಲ್ಲಿ ಹುಟ್ಟುವ ಉದ್ಯೋಗಗಳಲ್ಲಿ ಬಹುಪಾಲು ಕನ್ನಡಿಗರಿಗೇ ಸಿಗಬೇಕು ಅನ್ನುವತ್ತ ಕೈಗೊಳ್ಳಲಾಗಿರುವ ಹೋರಾಟಗಳಿರಬಹುದು, ಬೆಳಗಾವಿಯ ಗಡಿಯ ವಿಚಾರದಲ್ಲಿ ಪುಂಡ ಎಮ್.ಈ.ಎಸ್ ಸಂಘಟನೆಯನ್ನ ಹದ ಮಾಡಿದ ಸಂಗತಿಯಿರಬಹುದು, ಕರವೇ ಒಂದು ನಿಜವಾದ ಕನ್ನಡ ಪರ ರಾಜಕೀಯ ಪಕ್ಷದ ಹೊಣೆಗಾರಿಕೆಯನ್ನು ಬೀದಿ ಬದಿಯ ಹೋರಾಟದ ಮೂಲಕವೇ ರೂಪಿಸಿ ತೋರಿಸಿದೆ.

ಇನ್ನಾವುದೇ ರಾಜ್ಯದಲ್ಲಿ ಇಂತಹದೊಂದು ಹೋರಾಟ ಸಂಘಟನೆ ಇದ್ದಿದ್ದರೆ ಈ ಹೊತ್ತಿಗೆ ಹತ್ತರಿಂದ ಇಪ್ಪತ್ತು ಶಾಸಕರು ಆ ಸಂಘಟನೆಯಿಂದ ವಿಧಾನಸಭೆಯ ಮೆಟ್ಟಿಲೇರುತ್ತಿದ್ದರು. ಆದರೆ ತನ್ನ ಮೂಲ ಗುರುತು ಕನ್ನಡವೆಂಬುದನ್ನೇ ಮರೆತು ಜಾತಿ, ಧರ್ಮದ ಸಂಕೋಲೆಯಲ್ಲಿ ಬಂಧಿಯಾಗಿರುವ ಕನ್ನಡಿಗರ ನಾಡಿನಲ್ಲಿ ಇಂತಹದೊಂದು ಬದಲಾವಣೆಗೆ ಇನ್ನಷ್ಟು ಸಮಯ ಕಾಯಬೇಕಾದೀತು. ಈವರೆಗಿನ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನವೆಲ್ಲವೂ ಕರ್ನಾಟಕದಲ್ಲಿ ವಿಫಲವಾಗಿದ್ದರೆ ಅದಕ್ಕೆ ಕಾರಣ ಈ ಪಕ್ಷಗಳು ಕನ್ನಡ ಕೇಂದ್ರಿತವಾದ ಒಂದು ಸಿದ್ಧಾಂತವನ್ನಾಗಲಿ, ಬುಡಮಟ್ಟದ ಸಂಘಟನೆಯನ್ನಾಗಲಿ ಹೊಂದಿಲ್ಲದೇ ಇದ್ದಿದ್ದು. “ರಾಷ್ಟ್ರೀಯ ಪಕ್ಷದಲ್ಲಿ ಸ್ಥಾನಮಾನ ಸಿಗಲಿಲ್ಲ, ಅನ್ಯಾಯವಾಯಿತು” ಮುಂತಾದ ವೈಯಕ್ತಕ ನೆಲೆಯ ಕಾರಣವನ್ನು ಮುಂದೊಡ್ಡಿ ಪಕ್ಷ ಕಟ್ಟಿದ ಹೆಚ್ಚಿನ ನಾಯಕರಿಗೆ ಸಹಜವಾಗಿಯೇ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಆದರೆ ಬುಡಮಟ್ಟದಲ್ಲಿ ಸಂಘಟನೆ ಮತ್ತು ನಿರಂತರವಾಗಿ ಕನ್ನಡ ಪರ ಹೋರಾಟದ ಒಂದು ಇತಿಹಾಸವನ್ನೇ ಹೊಂದಿರುವ ಕರವೇ ರಾಜಕೀಯಕ್ಕೆ ಇಳಿದರೆ ಹತ್ತು ಹದಿನೈದು ವರ್ಷದಲ್ಲಾದರೂ ಕನ್ನಡಕ್ಕೆ ರಾಜಕೀಯದ ಬಲ ದಕ್ಕಬಹುದು ಅನ್ನುವ ನಿರೀಕ್ಷೆ ಸಾಕಷ್ಟು ಕನ್ನಡಿಗರಲ್ಲಿದೆ. ಅಂತಹದೊಂದು ಶಕ್ತಿ ಮತ್ತು ಸಾಧ್ಯತೆ ಸಂಘಟನಾ ಚತುರರಾದ ಕರವೇ ಅಧ್ಯಕ್ಷರಾದ ಟಿ.ಎ.ನಾರಾಯಣ ಗೌಡರಲ್ಲಿದೆ. ಎಡ-ಬಲದ ತಿಕ್ಕಾಟಗಳಿಂದ ಆಚೆ ನಿಂತು, ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಪರವಾದ ಸಿದ್ಧಾಂತದ ಸುತ್ತ ಒಂದು ಪ್ರಬಲ ಪ್ರಾದೇಶಿಕ ಪಕ್ಷ ಕಟ್ಟುವ ಆ ಪ್ರಯತ್ನಕ್ಕಾಗಿ ಎದುರು ನೋಡೊಣ.

--ವಸಂತ್ ಶೆಟ್ಟಿ