ಭಾರತದ ಕೇಂದ್ರಸರ್ಕಾರವು ಜಾರಿಗೊಳಿಸಲು ಮುಂದಾಗಿರುವ "ಸಾರಿಗೆ ಮತ್ತು ರಸ್ತೆ ಸುರಕ್ಷತಾ ಕಾಯಿದೆ - ೨೦೧೪"ನ್ನು ಕುರಿತಂತೆ ಇತ್ತೀಚೆಗೆ ಸಾರಿಗೆ ಸಂಸ್ಥೆಗಳ ನೌಕರರು, ಆಟೋ ಸಂಘಗಳು ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಿ ಹೊಸ ಕಾಯಿದೆಯ ಜಾರಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ. ಇದುವರೆಗೂ ರಸ್ತೆ ಸಾರಿಗೆ ಇಲಾಕೆಯು ರಾಜ್ಯಸರ್ಕಾರದ ಕೈಯಲ್ಲಿಯೇ ಇದೆ, ವಾಹನ ಚಾಲನೆಯ ಪರವಾನಿಗೆ ಕೊಡುವುದು, ಹೊಸ ವಾಹನಗಳ ನೊಂದಣಿ, ಬಳಸಿದ ವಾಹನಗಳ ಮರುಮಾರಾಟ, ರಸ್ತೆ ನಿಯಮಗಳನ್ನು ಮುರಿದವರಿಗೆ ದಂಡ ವಿಧಿಸುವ ಹಕ್ಕು ಇವೆಲ್ಲವೂ ರಾಜ್ಯಸರ್ಕಾರಗಳಿಗಿದ್ದು ಒಂದು ವೇಳೆ ಹೊಸ ಕಾಯಿದೆ ಜಾರಿಗೊಂಡರೆ ಈ ಅಧಿಕಾರವು ರಾಜ್ಯಸರ್ಕಾರದ ಕೈ ತಪ್ಪುತ್ತದೆ. ಈ ಕಾಯ್ದೆಯು ರಾಜ್ಯಗಳ ಹಕ್ಕನ್ನು ಸ್ಪಷ್ಟವಾಗಿ ಕಿತ್ತುಕೊಳ್ಳುತ್ತಿರುವುದಾಗಿದ್ದು ಸಾರಿಗೆ ಇಲಾಖೆಯ ಉತ್ತಮ ಆಡಳಿತಕ್ಕೆ ಇದು ದಾರಿ ಎಂಬ ನೆಪವನ್ನು ಕೇಂದ್ರ ನೀಡುತ್ತಿದೆ. ವಾಸ್ತವವಾಗಿ ತನ್ನ ಹಿತ ಕಾಪಾಡಿಕೊಳ್ಳಲು ಒಳ್ಳೆಯ ಆಡಳಿತಕ್ಕಾಗಿ ಕೇಂದ್ರದ ವಶಕ್ಕೆ ಪಡೆಯುತ್ತೇವೆ ಎನ್ನುವ ಇದೇ ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣವಾಗಬೇಕು ಮತ್ತು ಒಕ್ಕೂಟ ವ್ಯವಸ್ಥೆ ಸರಿಯಾಗಬೇಕು ಎಂದು ಕಹಳೆ ಊದುತ್ತಾ ಇರುವುದು ವಿಡಂಬನಾತ್ಮಕವಾಗಿದೆ.
ಹೊಸ ಕಾಯಿದೆಯ ಮೂಲಕ ಕೇಂದ್ರಸರ್ಕಾರವು ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವ ಮತ್ತು ರಾಜ್ಯಸರ್ಕಾರದ ಮೇಲೆ ತನ್ನ ಮೇಲುಗೈ ಸಾಧಿಸುವ ಒಕ್ಕೂಟ ವಿರೋಧಿ ಹೆಜ್ಜೆಯಿಟ್ಟಿದೆ ಎನ್ನಬಹುದು. ಸಾರಿಗೆ ನಿಯಮಗಳಂತಹ ಸರಳ ವಿಷಯವನ್ನೂ ಅತಿ ಕೇಂದ್ರೀಕೃತ ವ್ಯವಸ್ಥೆಯನ್ನಾಗಿಸುವುದು ಕರ್ನಾಟಕದಂತಹ ರಾಜ್ಯಕ್ಕೆ ದೊಡ್ಡಮಟ್ಟದ ಹೊಡೆತವೇ ಸರಿ. ಕಾಲಕಾಲಕ್ಕೂ ರಾಜ್ಯಗಳ ಹಕ್ಕುಗಳನ್ನು, ಇಲಾಕೆಗಳನ್ನೂ ಕೇಂದ್ರಸರ್ಕಾರವು ಕಿತ್ತುಕೊಳ್ಳುತ್ತಲೇ ಬಂದಿದೆಯೇ ಹೊರತು ರಾಜ್ಯಗಳ ಕೈ ಬಲಗೊಳಿಸುವ ಕೆಲಸವನ್ನು ಎಂದೂ ಮಾಡಿಲ್ಲ. ಮೈಸೂರು ಅರಸರ ಕಾಲದಲ್ಲಿ ಅತ್ಯಂತ ಮುಂದುವರೆದಿದ್ದ ಮೈಸೂರು ರೈಲ್ವೇಯಲ್ಲಿ ಕನ್ನಡಿಗರಿಗೆ (ಅದು ಕೇಂದ್ರದ ಸುಪರ್ದಿಗೆ ಹೋದ ನಂತರ) ನಿರಂತರ ಅನ್ಯಾಯಗಳಾಗುತ್ತಲೇ ಬಂದಿದೆ. ಈ ಅನ್ಯಾಯದ ಪರಿ ಯಾವ ಮಟ್ಟದಲ್ಲಿದೆಯೆಂದರೆ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ನೆಲಮಂಗಲಕ್ಕೆ ಒಂದು ರೈಲು ಓಡಿಸಬೇಕೆಂದರೆ ಕೇಂದ್ರಸರ್ಕಾರದ ಮುಂದೆ ಕೈಯೊಡ್ಡಿ ನಿಲ್ಲಬೇಕಾದ ಹಂತ ತಲುಪಿದ್ದೇವೆ. ಇನ್ನು ಕೆಲಸದ ವಿಷಯದಲ್ಲಂತೂ ಕನ್ನಡಿಗರನ್ನು ಹೊಸಕಿ ಹಾಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಕನ್ನಡಿಗರಾದ ಮೈಸೂರು ಅರಸರ ಕಾಲದಲ್ಲಿ ವಿಜೃಂಭಿಸುತ್ತಿದ್ದ ಹಲವಾರು ಕಾರ್ಖಾನೆಗಳನ್ನು, ಸಂಶೋಧನಾ ಕೇಂದ್ರಗಳನ್ನು ಕೇಂದ್ರಸರ್ಕಾರವು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಸಂಪೂರ್ಣ ಹಿಂದೀಮಯವಾಗಿವೆ, ಇವುಗಳಲ್ಲಿ ಕೆಲಸಕ್ಕೆ ಸೇರಲು ಹಿಂದೀ ಗೊತ್ತಿರಲೇಬೇಕೆಂದು ನಿಯಮ ಮಾಡಿಡಲಾಗಿದೆ. ಇನ್ನು ಬ್ಯಾಂಕುಗಳು ರಾಷ್ಟ್ರೀಕರಣಕೊಂಡ ನಂತರ ಕನ್ನಡ ನೆಲದಲ್ಲಿಯೇ ಜನ್ಮತಾಳಿದ ಬ್ಯಾಂಕುಗಳು ನಾಮುಂದು ತಾಮುಂದು ಎಂದು ಕನ್ನಡಿಗರ ಮೇಲೆಯೇ ಹಿಂದೀಹೇರಿಕೆ ಮಾಡಲು ಪೈಪೋಟಿ ನಡೆಸುತ್ತಿವೆ.
ಪರಿಸ್ಥಿತಿ ಹೀಗಿರುವಾಗ ರಸ್ತೆ ಇಲಾಕೆಯನ್ನೂ ಕೇಂದ್ರ ತನ್ನ ತೆಕ್ಕೆಗೆ ತೆಗೆದುಕೊಂಡು ಬಿಟ್ಟರೆ ಬೆಂಗಳೂರಿನಲ್ಲಿ ವಾಹನ ಚಾಲನೆ ಪರವಾನಿಗೆ ಪಡೆಯಬೇಕೆಂದರೆ ನಿಮಗೆ ಹಿಂದೀ ಗೊತ್ತಿರಲೇಬೇಕು ಎಂದು ನಿಯಮ ಮಾಡಿದರೂ ಅಚ್ಚರಿಯಿಲ್ಲ. ಇದುವರೆಗೂ ಕನ್ನಡಿಗರಿಗೆ ಮಾತ್ರವಿದ್ದ ಸಾರಿಗೆ ಇಲಾಖೆಯ ಕೆಲಸಗಳಿಗೆ ಬಿಹಾರಿಗಳೋ, ಉತ್ತರ ಪ್ರದೇಶದವರೋ ಬಂದು ತಮ್ಮ ಅಧಿಪತ್ಯ ಸ್ಥಾಪಿಸಿಬಿಟ್ಟರೆ ಕನ್ನಡಿಗರು ಮಿಸುಕಾಡುವಂತಿಲ್ಲ. ಇನ್ನು ಸಾರಿಗೆ ಇಲಾಕೆಯ ನಿಯಮಗಳನ್ನು ರೂಪಿಸುವುದು ಮತ್ತಿತರ ವಿಷಯಗಳ ಮೇಲೆ ತಮಗಿರುವ ಅಧಿಕಾರವನ್ನು ಕಳೆದುಕೊಳ್ಳುವ ರಾಜ್ಯಸರ್ಕಾರಗಳು ಮತ್ತಷ್ಟ್ಟು ಬಲಹೀನವಾಗಲಿವೆ. ನಮ್ಮ ಚಾಲನಾ ಪರವಾನಗಿ, ನಮ್ಮ ಪರವಾನಿಗೆಯ ಪರೀಕ್ಷೆಗಳು, ತುಂಬಬೇಕಾದ ಅರ್ಜಿಗಳು ಎಲ್ಲೆಡೆ ಇಂಗ್ಲೀಷ್ ಹಿಂದೀ ರಾರಾಜಿಸುವ ದಿನಗಳು ದೂರವಿಲ್ಲಾ. ಈ ಹಿನ್ನಲೆಯಲ್ಲಿ ಒಕ್ಕೂಟ ವಿರೋಧಿಯಾದ ಈ ಹೊಸ ಕಾಯಿದೆಯನ್ನು ವಿರೋಧಿಸಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತಕಾಯುವ ಕೆಲಸವಾಗಬೇಕಿದೆ.
- ಗಿರೀಶ್ ಕಾರ್ಗದ್ದೆ

