ಕನ್ನಡದ ಎರಡು ಸಾವಿರ ವರುಶಗಳ ಇತಿಹಾಸದ ಮೇಲೊಮ್ಮೆ
ಕಣ್ಣು ಹಾಯಿಸಿದರೆ ಮುಕ್ಕಾಲು ಪಾಲು ಅವಧಿಯಲ್ಲಿ ಕನ್ನಡ ನಾಡನ್ನಾಳಿದ ರಾಜಮನೆತನಗಳು ಇಡೀ ಭಾರತದಲ್ಲಿ
ಬೀರಿದ ಪ್ರಭಾವ, ಮಾಡಿದ ಸಾಧನೆಗಳು ನಮ್ಮ ಗಮನ ಸೆಳೆದರೆ ತದನಂತರದ ಕಾಲು ಪಾಲು ಅವಧಿಯಲ್ಲಿ ಪರಕೀಯರ
ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿದ್ದು, ನಮ್ಮ ಮೇಲಿನ ನಂಬಿಕೆಯನ್ನೇ ನಾವು ಕಳೆದುಕೊಂಡಿದ್ದು, ಕಷ್ಟ
ಪಟ್ಟು ಏಕೀಕರಣ ಸಾಧಿಸಿದ್ದು, ಆನಂತರ ಸ್ವತಂತ್ರ ಭಾರತದ ಒಕ್ಕೂಟದಲ್ಲಿ ರಾಜಕೀಯವಾಗಿ ಯಾವುದೇ ಪ್ರಭಾವ
ಬೀರದೇ ಇತರರಿಗೆ ಬರೀ ಚಪ್ಪಾಳೆ ಹೊಡೆಯುವ ಹಂತದಲ್ಲೇ ನಿಂತು ಹೋಗಿರುವ ದುರಂತ ಕಾಣಿಸುತ್ತೆ. ಸ್ವಾತಂತ್ರ್ಯ
ಬಂದ ನಂತರದ ಅವಧಿಯಲ್ಲಿ ಕನ್ನಡಕ್ಕೆ ಶಿಕ್ಷಣ, ಆಡಳಿತ ಹೀಗೆ ಕೆಲವು ವಿಷಯಗಳಲ್ಲಿ ಒಂದಿಷ್ಟು ಬಲ ಬಂದರೂ
ರಾಜಕೀಯವಾಗಿ ಕನ್ನಡಕ್ಕೆ ಒಂದು ಬಲ ತಂದುಕೊಳ್ಳದೇ ಕನ್ನಡವೆಂದರೆ ಸಾಹಿತ್ಯ, ಸಂಗೀತ, ಸಿನೆಮಾದಂತಹ
ಜುಟ್ಟಿನ ಮಲ್ಲಿಗೆಗೆ ನಮ್ಮ ಆಲೋಚನೆಯನ್ನು ಸೀಮಿತಗೊಳಿಸಿಕೊಂಡಿದ್ದು ನಮ್ಮೆಲ್ಲ ಸಮಸ್ಯೆಗಳ
ಮೂಲದಲ್ಲಿದೆ. ಜಾಗತೀಕರಣ, ತಂತ್ರಜ್ಞಾನದಲ್ಲಾಗಿರುವ ಕ್ಷಿಪ್ರ ಬದಲಾವಣೆ, ಇದರ ಬೆನ್ನಲ್ಲೇ ಆಗಿರುವ
ಅನಿಯಂತ್ರಿತ ಪರನುಡಿಯವರ ವಲಸೆ ನಮ್ಮ ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸಿವೆ.
ಕನ್ನಡ ಕೇಂದ್ರಿತವಾದ ರಾಜಕಾರಣ ಮಾಡುವ ಒಂದೇ ಒಂದು
ರಾಜಕೀಯ ಪಕ್ಷವನ್ನ ನಾವು ಕಟ್ಟಿಕೊಳ್ಳದಿರುವುದರ ಪರಿಣಾಮ ವಿಧಾನಸೌಧದಲ್ಲಿ ಆಗುವ ಚರ್ಚೆಗಳಲ್ಲಿ ಕಾಣಬಹುದು.
ಕನ್ನಡ, ಕನ್ನಡಿಗರ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳ ವಿಷಯಗಳು ಚರ್ಚೆಗೆ ಬರುವುದಾಗಲಿ, ಬಂದರೂ
ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರತ್ತ ಕೆಲಸ ಮಾಡುವ ನಿಷ್ಟೆ, ಕಾಳಜಿಯನ್ನಾಗಲಿ ನೋಡಲು ನಮಗೆ
ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ನದಿ ನೀರಿನ ಹಂಚಿಕೆಯಿರಬಹುದು, ರಸ್ತೆ,ರೈಲುಗಳ ಸೌಕರ್ಯದ
ವಿಷಯವಿರಬಹುದು, ಕೇಂದ್ರದಿಂದ ನ್ಯಾಯವಾಗಿ ದಕ್ಕಬೇಕಾದ ಯೋಜನೆ, ಅನುದಾನಗಳಿರಬಹುದು, ಗಡಿಯ ವಿಚಾರವಿರಬಹುದು,
ಕರ್ನಾಟಕದಲ್ಲಿ ಕನ್ನಡ, ಕನ್ನಡಿಗನ ಸಾರ್ವಭೌಮತ್ವದ ವಿಚಾರವಿರಬಹುದು, ಹೀಗೆ ಪ್ರತಿಯೊಂದರಲ್ಲೂ ನಾವು
ಹೀನಾಯವಾದ ಸ್ಥಿತಿ ತಲುಪಿದ್ದೇವೆ.
ನಮ್ಮ ನಾಡಿನ ರಾಜಕಾರಣವನ್ನು ಕನ್ನಡ ಬಿಟ್ಟು ಇನ್ನೆಲ್ಲ
ತರದ ವಾದಗಳು, ಸಿದ್ಧಾಂತಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಹೊತ್ತಿನಲ್ಲಿ ಕಳೆದ ಹದಿನೈದು ವರ್ಷಗಳಲ್ಲಿ
ಒಂದು ಸಣ್ಣ ಸಮಾಧಾನವೆಂಬಂತೆ ತಲೆ ಎತ್ತಿದ್ದು ಕರ್ನಾಟಕ ರಕ್ಷಣಾ ವೇದಿಕೆ ಅನ್ನುವ ಸಂಘಟನೆ. ಹದಿನೈದು
ವರ್ಷಗಳಲ್ಲಿ ಕಾವೇರಿ, ಕೃಷ್ಣಾ ನದಿಯ ವಿಚಾರವಿರಬಹುದು, ಕಳಸಾಬಂಡೂರಿಯಂತಹ
ಕುಡಿಯುವ ನೀರಿನ ವಿಚಾರವಿರಬಹುದು, ರೈಲ್ವೇ ಮತ್ತು ಬ್ಯಾಂಕ್ ನೇಮಕಾತಿಯಂತಹ ವಿಷಯವಿರಬಹುದು, ಕರ್ನಾಟಕದಲ್ಲಿ
ಹುಟ್ಟುವ ಉದ್ಯೋಗಗಳಲ್ಲಿ ಬಹುಪಾಲು ಕನ್ನಡಿಗರಿಗೇ ಸಿಗಬೇಕು ಅನ್ನುವತ್ತ ಕೈಗೊಳ್ಳಲಾಗಿರುವ ಹೋರಾಟಗಳಿರಬಹುದು,
ಬೆಳಗಾವಿಯ ಗಡಿಯ ವಿಚಾರದಲ್ಲಿ ಪುಂಡ ಎಮ್.ಈ.ಎಸ್ ಸಂಘಟನೆಯನ್ನ ಹದ ಮಾಡಿದ ಸಂಗತಿಯಿರಬಹುದು, ಕರವೇ
ಒಂದು ನಿಜವಾದ ಕನ್ನಡ ಪರ ರಾಜಕೀಯ ಪಕ್ಷದ ಹೊಣೆಗಾರಿಕೆಯನ್ನು ಬೀದಿ ಬದಿಯ ಹೋರಾಟದ ಮೂಲಕವೇ ರೂಪಿಸಿ
ತೋರಿಸಿದೆ.
ಇನ್ನಾವುದೇ ರಾಜ್ಯದಲ್ಲಿ ಇಂತಹದೊಂದು ಹೋರಾಟ ಸಂಘಟನೆ
ಇದ್ದಿದ್ದರೆ ಈ ಹೊತ್ತಿಗೆ ಹತ್ತರಿಂದ ಇಪ್ಪತ್ತು ಶಾಸಕರು ಆ ಸಂಘಟನೆಯಿಂದ ವಿಧಾನಸಭೆಯ ಮೆಟ್ಟಿಲೇರುತ್ತಿದ್ದರು.
ಆದರೆ ತನ್ನ ಮೂಲ ಗುರುತು ಕನ್ನಡವೆಂಬುದನ್ನೇ ಮರೆತು ಜಾತಿ, ಧರ್ಮದ ಸಂಕೋಲೆಯಲ್ಲಿ ಬಂಧಿಯಾಗಿರುವ ಕನ್ನಡಿಗರ
ನಾಡಿನಲ್ಲಿ ಇಂತಹದೊಂದು ಬದಲಾವಣೆಗೆ ಇನ್ನಷ್ಟು ಸಮಯ ಕಾಯಬೇಕಾದೀತು. ಈವರೆಗಿನ ಪ್ರಾದೇಶಿಕ ಪಕ್ಷ ಕಟ್ಟುವ
ಪ್ರಯತ್ನವೆಲ್ಲವೂ ಕರ್ನಾಟಕದಲ್ಲಿ ವಿಫಲವಾಗಿದ್ದರೆ ಅದಕ್ಕೆ ಕಾರಣ ಈ ಪಕ್ಷಗಳು ಕನ್ನಡ ಕೇಂದ್ರಿತವಾದ
ಒಂದು ಸಿದ್ಧಾಂತವನ್ನಾಗಲಿ, ಬುಡಮಟ್ಟದ ಸಂಘಟನೆಯನ್ನಾಗಲಿ ಹೊಂದಿಲ್ಲದೇ ಇದ್ದಿದ್ದು. “ರಾಷ್ಟ್ರೀಯ
ಪಕ್ಷದಲ್ಲಿ ಸ್ಥಾನಮಾನ ಸಿಗಲಿಲ್ಲ, ಅನ್ಯಾಯವಾಯಿತು” ಮುಂತಾದ ವೈಯಕ್ತಕ ನೆಲೆಯ ಕಾರಣವನ್ನು ಮುಂದೊಡ್ಡಿ
ಪಕ್ಷ ಕಟ್ಟಿದ ಹೆಚ್ಚಿನ ನಾಯಕರಿಗೆ ಸಹಜವಾಗಿಯೇ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಆದರೆ ಬುಡಮಟ್ಟದಲ್ಲಿ
ಸಂಘಟನೆ ಮತ್ತು ನಿರಂತರವಾಗಿ ಕನ್ನಡ ಪರ ಹೋರಾಟದ ಒಂದು ಇತಿಹಾಸವನ್ನೇ ಹೊಂದಿರುವ ಕರವೇ ರಾಜಕೀಯಕ್ಕೆ
ಇಳಿದರೆ ಹತ್ತು ಹದಿನೈದು ವರ್ಷದಲ್ಲಾದರೂ ಕನ್ನಡಕ್ಕೆ ರಾಜಕೀಯದ ಬಲ ದಕ್ಕಬಹುದು ಅನ್ನುವ ನಿರೀಕ್ಷೆ
ಸಾಕಷ್ಟು ಕನ್ನಡಿಗರಲ್ಲಿದೆ. ಅಂತಹದೊಂದು ಶಕ್ತಿ ಮತ್ತು ಸಾಧ್ಯತೆ ಸಂಘಟನಾ ಚತುರರಾದ ಕರವೇ ಅಧ್ಯಕ್ಷರಾದ
ಟಿ.ಎ.ನಾರಾಯಣ ಗೌಡರಲ್ಲಿದೆ. ಎಡ-ಬಲದ ತಿಕ್ಕಾಟಗಳಿಂದ ಆಚೆ ನಿಂತು, ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ
ಪರವಾದ ಸಿದ್ಧಾಂತದ ಸುತ್ತ ಒಂದು ಪ್ರಬಲ ಪ್ರಾದೇಶಿಕ ಪಕ್ಷ ಕಟ್ಟುವ ಆ ಪ್ರಯತ್ನಕ್ಕಾಗಿ
ಎದುರು ನೋಡೊಣ.
--ವಸಂತ್ ಶೆಟ್ಟಿ
